ಬೆಂಗಳೂರು: 2017-18ರ ಮುನ್ನ ಆರಂಭವಾಗಿರುವ ಶಾಲೆಗಳು ಅನುಮತಿ ನವೀಕರಣ ಮಾಡಿಸುವ ವೇಳೆ ಅಗ್ನಿಶಾಮಕ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಿಂದ ಪ್ರಮಾಣ ಪತ್ರ ಪಡೆದಿರಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಅವಿನಾಶ್ ಮೆಹೋತ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಶಾಲೆಗಳಲ್ಲಿ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ 2020ರ ನವೆಂಬರ್ 10ರಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ಅವರಿದ್ದ ನ್ಯಾಯಪೀಠ, ಸರ್ಕಾರದ ಅಧಿಸೂಚನೆ ರದ್ದುಪಡಿಸಿ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಈ ಸುರಕ್ಷತಾ ಕ್ರಮಗಳು 2017-18ರ ಶೈಕ್ಷಣಿಕ ವರ್ಷ ಅಥವಾ ಆ ಬಳಿಕ ಪ್ರಾರಂಭಗೊಂಡು ಶೈಕ್ಷಣಿಕ ಮಾನ್ಯತೆ ಪಡೆದ ಶಾಲೆಗಳಿಗೆ ಅನ್ವಯಿಸಬೇಕೇ ಹೊರತು ಅದಕ್ಕಿಂತ ಮೊದಲು ಪ್ರಾರಂಭಗೊಂಡಿರುವ ಶಾಲೆಗಳಿಗೆ ಅನ್ವಯಿಸುವುದು ಸರಿಯಲ್ಲ. ಶಾಲಾ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕಾಲಮಿತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಸರ್ಕಾರ ಅದರಂತೆ ಕ್ರಮ ಕೈಗೊಂಡಿದೆ. ಶೈಕ್ಷಣಿಕ ಸಂಸ್ಥೆಗಳು ಇದನ್ನು ಪ್ರಶ್ನಿಸುವಂತಿಲ್ಲ ಎಂದು ಸರ್ಕಾರ ವಾದಿಸಿತ್ತು.
ಇದನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳು 2017-18ರ ಬಳಿಕ ಬಂದ ಶಾಲೆಗಳಿಗೆ ಅನ್ವಯವಾಗಲಿದೆ ಎಂದು ಹೇಳಿ ಅರ್ಜಿ ಇತ್ಯರ್ಥಪಡಿಸಿದೆ.
ಇದನ್ನೂಓದಿ:ಮ್ಯಾನುವಲ್ ರೈಲ್ವೆ ಗೇಟ್ಗಳಿಂದ ಮುಕ್ತಿ ಕೊಡಿ: ಲೋಕಸಭೆಯಲ್ಲಿ ಪಿಸಿ ಮೋಹನ್ ಮನವಿ