ಬೆಂಗಳೂರು:ಬಿಬಿಎಂಪಿ ಚುನಾವಣೆಗೆ ಸರ್ಕಾರ ವಾರ್ಡ್ ವಾರು ನಿಗದಿ ಪಡಿಸಿ ಹೊರಡಿಸಿದ್ದ ಮೀಸಲಾತಿ ಅಧಿಸೂಚನೆಯನ್ನು ಹೈಕೋರ್ಟ್ ರದ್ದು ಪಡಿಸಿದೆ. ಅಲ್ಲದೆ, ಡಿಸೆಂಬರ್ 31ರ ಅಂತ್ಯದ ವೇಳೆಗೆ ಪಾಲಿಕೆ ಚುನಾವಣೆ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.
ಈಜಿಪುರದ ಕೆ.ಮಹದೇವ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಚಂದನ್‌ಗೌಡರ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿ ಮೀಸಲಾತಿ ಅಧಿಸೂಚನೆಯನ್ನು ರದ್ದು ಪಡಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಸಂದರ್ಭದಲ್ಲಿ ಮಹಿಳಾ ಜನಸಂಖ್ಯೆ ಆಧಾರವಾಗಿ ಮೀಸಲಾತಿ ನೀಡಬೇಕು.
ಆದರೆ, ಯಾದೃಚ್ಚಿಕವಾಗಿ(ರ‍್ಯಾಂಡ್ಂ) ನೀಡಲಾಗಿದೆ. ಹೀಗಾಗಿ ಹಿಂದುಳಿದ ವರ್ಗಗಳು ಮತ್ತು ಮಹಿಳಾ ಮೀಸಲಾತಿ ಸಂಬಂಧ ಹೊರಡಿಸಿರುವ ಅಧಿಸೂಚನೆ ರದ್ದು ಪಡಿಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.
ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಜನಸಂಖ್ಯೆಗೆ ಆಧಾರವಾಗಿ ನಿಗದಿ ಪಡಿಸಲಾಗಿದೆ. ಹಾಗಾಗಿ ಈ ಬಗ್ಗೆ ಯಾವುದೇ ರೀತಿಯಲ್ಲಿಯೂ ಬದಲಾವಣೆ ಅಗತ್ಯವಿಲ್ಲ. ಡಿಸೆಂಬರ್ 31ರ ಅಂತ್ಯದೊಳಗೆ ಚುನಾವಣೆ ನಡೆಸಿ ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ನ್ಯಾ.ಭಕ್ತವತ್ಸಲ ಅವರ ಆಯೋಗಕ್ಕೆ ಹಿಂದುಳಿದ ವರ್ಗಗಳ ಜನಸಂಖ್ಯೆಯ ಸಂಪೂರ್ಣ ಮಾಹಿತಿ ಒದಗಿಸಬೇಕು.
ಜತೆಗೆ, ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಬೇಕು. ನವೆಂಬರ್ 30ರ ಅಂತ್ಯದೊಳಗೆ ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳ್ಳಿಸಬೇಕು. ಡಿಸೆಂಬರ್ 31ರ ಅಂತ್ಯದ ವೇಳೆಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದಕ್ಕೂ ಮುನ್ನ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಪ್ರಮಾಣ ಪತ್ರ ಸಲ್ಲಿಸಿ ಮೀಸಲಾತಿ ದೋಷಗಳನ್ನು ಸರಿಪಡಿಸಲು 16 ವಾರಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು. ಇದನ್ನು ನ್ಯಾಯಪೀಠ ತಿರಸ್ಕರಿಸಿ, ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತು.
ಪ್ರಕರಣದ ಹಿನ್ನೆಲೆ ಏನು?2020ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ರಾಜ್ಯ ಸರ್ಕಾರವು ತಡೆಯಾಜ್ಞೆ ಪಡೆದಿತ್ತು. ಈ ನಡುವೆ ಪ್ರಕರಣವೊಂದರ ವಿಚಾರಣೆ ವೇಳೆ ದೇಶದೆಲ್ಲೆಡೆ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಳಂಬ ಮಾಡದೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಆನಂತರ ಸರ್ಕಾರ ಮೀಸಲು ಅಧಿಸೂಚನೆ ಮತ್ತು ವಾರ್ಡ್ ಪುನರ್ ವಿಂಗಡಣೆ ಮಾಡಿತ್ತು. ಇದರಲ್ಲಿದ್ದ ದೋಷಗಳನ್ನು ಪ್ರಶ್ನಿಸಿ ಹಲವು ಅರ್ಜಿಗಳು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು. ಅಲ್ಲದೇ, ಬಿಬಿಎಂಪಿ ಚುನಾವಣೆಗೆ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಮೀಸಲಾತಿ ಅಧಿಸೂಚನೆಯಲ್ಲಿ ನಿಯಮ ಪಾಲನೆಯಾಗಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಭಕ್ತವತ್ಸಲ ಸಮಿತಿ ನೀಡಿರುವ ವರದಿ ಆಧರಿಸಿ ಮೀಸಲು ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಆದರೆ, ಕೃಷ್ಣಮೂರ್ತಿ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವ ಮೂರು ಹಂತದ ಪರಿಶೀಲನೆ (ಟ್ರಿಪಲ್ ಟೆಸ್ಟ್) ಅನ್ನು ಭಕ್ತವತ್ಸಲ ಸಮಿತಿ ಅನ್ವಯಿಸಿಕೊಂಡಿಲ್ಲ. ಸರ್ಕಾರ ಸಹ ಮೀಸಲು ಕಲ್ಪಿಸುವಾಗ ಟ್ರಿಪಲ್ ಟೆಸ್ಟ್ ಪರಿಗಣಿಸಿಲ್ಲ. ಯಾವ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲವೋ ಅಂತಹ ಜಾತಿಗಳಿಗೆ ಮೀಸಲು ಕಲ್ಪಿಸಬೇಕಾಗುತ್ತದೆ.
ಬಿಬಿಎಂಪಿ ವಾರ್ಡ್ ಮೀಸಲು ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಭಕ್ತವತ್ಸಲ ಸಮಿತಿ ಸಹ ಸೂಕ್ತ ವಿಧಾನ ಅನುಸರಿಸಿಲ್ಲ. ಇದುವರೆಗೆ ಯಾವ ಯಾವ ಜಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂಬ ಪಟ್ಟಿ ಒದಗಿಸಿಲ್ಲ. ಆದ್ದರಿಂದ, ಬಿಬಿಎಂಪಿ ವಾರ್ಡ್‌ವಾರು ಮೀಸಲು ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರ ಕೋರಿದ್ದರು
ಇದನ್ನೂ ಓದಿ:ಬಿಬಿಎಂಪಿ ಚುನಾವಣೆ 2022: ಅಂತಿಮ ಮತದಾರರ ಪಟ್ಟಿ ಪ್ರಕಟ