ಬೆಂಗಳೂರು: ಲೆಕ್ಕವಿಲ್ಲದ ಪ್ರತಿಯೊಂದು ವಹಿವಾಟಿಗೂ ತೆರಿಗೆ ವಿಧಿಸಬಹುದು ಎಂದು ಪೂರ್ವಭಾವನೆ ಮಾಡಲು ಬರುವುದಿಲ್ಲ. ಹಾಗೆಯೇ, ಐಟಿ ತಪಾಸಣೆ ವೇಳೆ ಪತ್ತೆಯಾದ ಹಣ ತೆರಿಗೆ ವಂಚಿಸಿರುವುದು ಖಚಿತವಾಗುವವರೆಗೆ ಕಾನೂನು ಕ್ರಮ ಜರುಗಿಸುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವಿರುದ್ಧದ ತೆರಿಗೆ ವಂಚನೆ, ಸಾಕ್ಷ್ಯ ನಾಶ ಆರೋಪ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸುವ ಸಂದರ್ಭದಲ್ಲಿ ನ್ಯಾ. ಜಾನ್ ಮೈಕಲ್ ಕುನ್ಹ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಒಮ್ಮೆ ಆರೋಪಗಳು ನಿಜವೆಂದೇ ಒಪ್ಪಿಕೊಂಡರೂ ಸಹ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 276 ಸಿ(1) ರ ಅಡಿ ಪ್ರಕರಣ ದಾಖಲಿಸಲು ಬರುವುದಿಲ್ಲ. ಹೀಗಾಗಿ ಡಿ.ಕೆ ಶಿವಕುಮಾರ್ ವಿರುದ್ಧ ದಾಖಲಿಸಿರುವ ಪ್ರಕರಣ ನಿಯಮಬಾಹಿರವಾಗಿದ್ದು, ಅದನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.