ಬೆಂಗಳೂರು: ವಕೀಲರು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ನ್ಯಾಯಾಲಯಗಳು ನಡೆಯದಿದ್ದರೆ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗುತ್ತದೆ. ಜತೆಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಾಮಾನ್ಯ ಜನರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹಾಗೆಯೇ ನ್ಯಾಯಾಲಯಗಳ ಕಲಾಪದಿಂದ ಹೊರಗುಳಿದ ವಿಚಾರವಾಗಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಂಡ್ಯ ಮತ್ತು ದಾವಣಗೆರೆ ಜಿಲ್ಲಾ ವಕೀಲರ ಸಂಘಗಳು ಕ್ಷಮೆ ಕೋರಿ ಏ. 22ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ವಕೀಲರ ಸಂಘಗಳು ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ್ದ ವಿಚಾರವಾಗಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಏ. 22ರೊಳಗೆ ಸಂಘಗಳು ಕ್ಷಮೆ ಕೋರಿ ಪ್ರಮಾಣಪತ್ರ ಸಲ್ಲಿಸಬೇಕೆಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಕೋರ್ಟ್ ಕಲಾಪ ಬಹಿಷ್ಕರಿಸಿದ ಸಂಘಗಳ ಕ್ರಮಕ್ಕೆ ಆಕ್ಷೇಪಿಸಿದ ಪೀಠ, ನ್ಯಾಯಾಲಯಗಳ ಕಾರ್ಯ ಕಲಾಪಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ್ದು ವಕೀಲರ ಕರ್ತವ್ಯ. ಒಂದು ವೇಳೆ ನ್ಯಾಯಾಲಯಗಳ ಕಲಾಪಕ್ಕೆ ತೊಂದರೆಯಾದರೆ ಅದು ನೇರವಾಗಿ ಕಕ್ಷಿದಾರರ ಮೇಲಾಗುತ್ತದೆ.
ನ್ಯಾಯಾಂಗ ನಿಂದನೆ ದಾಖಲಿಸಿರುವುದು ಯಾರನ್ನೂ ಜೈಲಿಗೆ ಕಳುಹಿಸಲು ಅಲ್ಲ, ವಕೀಲರು ಯಾವುದೇ ಕಾರಣಕ್ಕೂ ನ್ಯಾಯಾಲಯಗಳ ಕಲಾಪದಿಂದ ಹೊರಗುಳಿಯಬಾರದು, ಬಹಿಷ್ಕರಿಸಬಾರದು ಎನ್ನುವುದು ನಿಯಮ. ಇದನ್ನು ಪಾಲಿಸುವ ಭರವಸೆ ನಿಮ್ಮಿಂದ ಬೇಕಾಗಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.