ಕರ್ನಾಟಕ

karnataka

ETV Bharat / state

2016-17ನೇ ಸಾಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯ ಇಲ್ಲ: ಹೈಕೋರ್ಟ್

2016-17ನೇ ಸಾಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆ ಇಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

high-court
ಹೈಕೋರ್ಟ್ ತೀರ್ಪು

By

Published : Apr 2, 2021, 9:01 PM IST

ಬೆಂಗಳೂರು: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ 2016-17 ಹಾಗೂ 2017-18ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದುಕೊಂಡ ಅಭ್ಯರ್ಥಿಗಳಿಗೆ ಒಂದು ವರ್ಷದ ಸರ್ಕಾರಿ ಮತ್ತು ಗ್ರಾಮೀಣ ಸೇವೆ ಕಡ್ಡಾಯವಾಗಿರುವ ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಕಡ್ಡಾಯ ಸೇವಾ ಅಧಿನಿಯಮ-2012’ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಇದೇ ವೇಳೆ, 2018-19ನೇ ಶೈಕ್ಷಣಿಕ ವರ್ಷ ಹಾಗೂ ನಂತರದಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆದು ಒಂದು ವರ್ಷದ ಸರ್ಕಾರಿ ಮತ್ತು ಗ್ರಾಮೀಣ ಸೇವೆ ಬಗ್ಗೆ ಬಾಂಡ್ ಬರೆದುಕೊಡುವ ಅಭ್ಯರ್ಥಿಗಳಿಗೆ 2012ರ ಅಧಿನಿಯಮ ಅನ್ವಯವಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಕಡ್ಡಾಯ ಸೇವಾ ಅಧಿನಿಯಮ-2012’ ರ ಸಿಂಧುತ್ವ ಪ್ರಶ್ನಿಸಿ ಹಾಗೂ ಈ ಅಧಿನಿಯಮ ತಮಗೆ ಅನ್ವಯಿಸುವುದಿಲ್ಲ ಎಂದು 2016-17, 2017-18 ನೇ ಶೈಕ್ಷಣಿಕ ವರ್ಷದ 456 ಹಾಗೂ 2018-19ನೇ ಶೈಕ್ಷಣಿಕ ವರ್ಷದ 59 ಅಭ್ಯರ್ಥಿಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ ಕಾಯ್ದೆಯ ಸಿಂಧುತ್ವದ ಬಗ್ಗೆ ಈಗಾಗಲೇ ಏಕಸದಸ್ಯ ಮತ್ತು ವಿಭಾಗೀಯ ಪೀಠದಲ್ಲಿ ವಿಸ್ತ್ರೃತ ವಿಚಾರಣೆ ನಡೆದಿದೆ. ಅಂತಿಮವಾಗಿ ಹೈಕೋರ್ಟ್ ಕಾಯ್ದೆಯ ಸಿಂಧುತ್ವವನ್ನು ಎತ್ತಿಹಿಡಿದಿದೆ. ಆದ್ದರಿಂದ ಸಿಂಧುತ್ವದ ಬಗ್ಗೆ ಆದೇಶ ಹೊರಡಿಸುವುದು ಅಪ್ರಸ್ತುತ. ಹೀಗಾಗಿ ಸೀಮಿತ ಶೈಕ್ಷಣಿಕ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ವಿಚಾರವಾಗಿ ಉಂಟಾಗಿರುವ ತಾಂತ್ರಿಕ ಗೊಂದಲಕ್ಕೆ ಸ್ಪಷ್ಟನೆ ನೀಡುವುದಷ್ಟೇ ಈಗಿರುವ ವಿವಾದ. ಅದನ್ನಷ್ಟೇ ಪರಿಗಣಿಸಲಾಗುತ್ತಿದೆ.

ಅದರಂತೆ, 2016-17 ಹಾಗೂ 2017-18ನೇ ಸಾಲಿನ ಪ್ರವೇಶದ ವೇಳೆ ವೈದ್ಯಕೀಯ ಕಾಲೇಜುಗಳು ಪೂರ್ವಮಾಹಿತಿ ನೀಡದೇ ಇರುವುದರಿಂದ ಹಾಗೂ ಅಭ್ಯರ್ಥಿಗಳು ಪ್ರವೇಶದ ವೇಳೆ ಬಾಂಡ್ ಬರೆದುಕೊಡದೇ ಇರುವುದರಿಂದ, ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದುಕೊಂಡ ಅಭ್ಯರ್ಥಿಗಳಿಗೆ ಒಂದು ವರ್ಷದ ಸರ್ಕಾರಿ ಮತ್ತು ಗ್ರಾಮೀಣ ಸೇವೆ ಕಡ್ಡಾಯವಲ್ಲ. ಅದರಂತೆ ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಕಡ್ಡಾಯ ಸೇವಾ ಅಧಿನಿಯಮ-2012 ಈ ಸಾಲಿನವರಿಗೆ ಅನ್ವಯಿಸುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅದೇ ರೀತಿ, 2018-19ನೇ ಸಾಲಿನಲ್ಲಿ ಹಾಗೂ ತದ ನಂತರದ ಶೈಕ್ಷಣಿಕ ವರ್ಷಗಳ ಪ್ರವೇಶಾತಿ ಸಂದರ್ಭದಲ್ಲಿ ಪೂರ್ವ ಮಾಹಿತಿ ನೀಡಿರುವುರಿಂದ ಪ್ರವೇಶ ಮಾಹಿತಿ ಪುಸ್ತಕದಲ್ಲಿ ವಿವರ ಪ್ರಕಟಿಸಿದ್ದರಿಂದ ಹಾಗೂ ಪ್ರವೇಶ ಪಡೆದುಕೊಳ್ಳುವ ವೇಳೆ ಅಭ್ಯರ್ಥಿಗಳು ಬಾಂಡ್ ಬರೆದುಕೊಟ್ಟಿರುವುದರಿಂದ ಇವರಿಗೆ ನಿಯಮ ಅನ್ವಯಿಸುತ್ತದೆ. ಅದರಂತೆ 2018-19ನೇ ಶೈಕ್ಷಣಿಕ ವರ್ಷ ಹಾಗೂ ನಂತರದಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಂಡವರಿಗೆ ಒಂದು ವರ್ಷದ ಸರ್ಕಾರಿ ಮತ್ತು ಗ್ರಾಮೀಣ ಸೇವೆ ಕಡ್ಡಾಯ ನಿಯಮಗಳು ಅನ್ವಯಿಸುತ್ತವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ABOUT THE AUTHOR

...view details