ಬೆಂಗಳೂರು:ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾನೂನು ಪದವಿ ತರಗತಿಗಳಿಗೆ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿರುವ ಆದೇಶವನ್ನು ಮಾರ್ಪಡಿಸಬೇಕು ಎಂದು ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಲು ನಿರಾಕರಿಸಿರುವ ಹೈಕೋರ್ಟ್, ಎಲ್ಎಲ್ಬಿ ಪರೀಕ್ಷೆ ಬರೆಯದೆಯೇ ವಕೀಲರಾಗಲು ಬಯಸಿದ್ದೀರಾ? ಎಂದು ಪ್ರಶ್ನಿಸಿದೆ.
ಯುಜಿಸಿ ಸೂಚನೆ ಹೊರತಾಗಿಯೂ ಕೆಎಸ್ಎಲ್ಯು ಪರೀಕ್ಷೆಗಳನ್ನು ನಡೆಸುವ ಕ್ರಮ ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಬದಿಗಿರಿಸಿದ್ದ ವಿಭಾಗೀಯ ಪೀಠ, ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿ ನವೆಂಬರ್ 24ರಂದು ಆದೇಶಿಸಿತ್ತು. ಈ ಆದೇಶ ಮಾರ್ಪಡಿಸುವಂತೆ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಿದ್ಯಾರ್ಥಿಗಳ ಪರ ವಕೀಲರು ವಾದ ಮಂಡಿಸಿ, ಪರೀಕ್ಷೆಗಳಿಗೆ ತಡೆ ನೀಡಿ ಏಕಸದಸ್ಯ ಪೀಠ ನವೆಂಬರ್ 12 ರಂದು ಮಧ್ಯಂತರ ಆದೇಶ ಹೊರಡಿಸಿದೆ. ಈ ಮಧ್ಯಂತರ ಆದೇಶದ ವಿರುದ್ಧ ವಿವಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹವಾಗಿಲ್ಲ. ವಿವಿ ಏಕ ಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶ ತೆರವು ಕೋರಿ ಆಕ್ಷೇಪಣೆ ಸಲ್ಲಿಸಬೇಕು. ಅಲ್ಲಿಯೇ ವಿಚಾರಣೆ ನಡೆಸುವುದು ಸೂಕ್ತ. ಅಲ್ಲಿವರೆಗೂ ವಿವಿ ಪರೀಕ್ಷೆಗಳನ್ನು ನಡೆಸಬಾರದು. ಅದಕ್ಕಾಗಿ ಈ ಹಿಂದೆ ನೀಡಿರುವ ಆದೇಶವನ್ನು ಮಾರ್ಪಡಿಸಬೇಕು ಎಂದು ವಿದ್ಯಾರ್ಥಿಗಳ ಪರ ವಕೀಲರು ಮನವಿ ಮಾಡಿದರು.
ವಿವಿ ಪರ ವಕೀಲರು ಹಾಗು ಭಾರತೀಯ ವಕೀಲರ ಪರಿಷತ್ ಪರ ವಕೀಲರು ಇದಕ್ಕೆ ಆಕ್ಷೇಪಿಸಿ, ಪರೀಕ್ಷೆ ನಡೆಸದೇ ವಿವಿ ಪದವಿ ನೀಡಿದರೆ ಅದನ್ನು ಪರಿಗಣಿಸದಿರಲು ಬಿಸಿಐ ನಿರ್ಧರಿಸಿದೆ. ಈ ವಿಚಾರದಲ್ಲಿ ಬಿಸಿಐ ನಿಲುವು ಸ್ಪಷ್ಟವಾಗಿದೆ. ಪರೀಕ್ಷೆ ನಡೆಸುವುದು ವಿಶ್ವವಿದ್ಯಾಲಯಕ್ಕೆ ಬಿಟ್ಟ ವಿಚಾರ. ಆದರೆ, ಪರೀಕ್ಷೆ ನಡೆಸಿ ನೀಡುವ ಪದವಿಯನ್ನು ಮಾತ್ರವೇ ಬಿಸಿಐ ಪರಿಗಣಿಸಲಿದೆ ಎಂದರು.
ವಾದ ಆಲಿಸಿದ ಪೀಠ, ಪರೀಕ್ಷೆ ನಡೆಸಬೇಡಿ ಎಂದು ಹೇಳಲು ವಿದ್ಯಾರ್ಥಿಗಳಿಗೆ ಯಾವುದೇ ಹಕ್ಕಿಲ್ಲ. ಎಲ್ಎಲ್ ಬಿ ಪರೀಕ್ಷೆ ಬರೆಯದೇ ನೀವು ವಕೀಲರಾಗಲು ಬಯಸುತ್ತಿದ್ದೀರಾ? ಹಾಗಿದ್ದರೆ, ನೀವು ಹೈಕೋರ್ಟ್ ನ್ಯಾಯಮೂರ್ತಿಯಾಗಬಹುದು. ಏಕೆಂದರೆ ನ್ಯಾಯಮೂರ್ತಿಯಾಗಲು ಯಾವುದೇ ಪರೀಕ್ಷೆ ಬರೆಯಬೇಕಿಲ್ಲ ಎಂದಿತು.