ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಅಮೃತ್ ಮಹಲ್ ಕಾವಲ್ ಜಮೀನು ಒತ್ತುವರಿ ತೆರವುಗೊಳಿಸದ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅರಣ್ಯ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆ ಹಿರಿಯ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಒತ್ತುವರಿ ತೆರವು ಕೋರಿ ವೈಲ್ಡ್ ಲೈಫ್ ಕನ್ಸರ್‌ವೇಷನ್ ಆಕ್ಷನ್ ಟೀಂ ಸಲ್ಲಿಸಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಅಮೃತ್‌ಮಹಲ್ ಕಾವಲ್ ಜಮೀನು ಒತ್ತುವರಿ ತೆರವು ಮಾಡದ ಹಿನ್ನಲೆ 2022ರ ಫೆ.8ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ವಿವರಣೆ ನೀಡುವಂತೆ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಪಶುಸಂಗೋಪನೆ ಇಲಾಖೆಯ ಅಮೃತ್ ಕಾವಲ್ ಜಾನುವಾರು ಕೇಂದ್ರದ ಉಪ ನಿರ್ದೇಶಕರಿಗೆ ತಾಕೀತು ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಮೃತ್ ಮಹಲ್ ಕಾವಲು ಸಂರಕ್ಷಿತ ಅರಣ್ಯ ಪ್ರದೇಶ ಸೇರಿದಂತೆ ಒತ್ತುವರಿಯಾಗಿರುವ ಸರ್ಕಾರಿ ಜಮೀನಿನ ತೆರವು ಕಾರ್ಯಚರಣೆ ಕೈಗೊಳ್ಳಬೇಕು. ಒತ್ತುವರಿ ತೆರವಿಗೆ ವಿಶೇಷ ಕಾರ್ಯಪಡೆ ರಚಿಸಿ ಆ ಕುರಿತು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆ ಪ್ರಧಾನ ಕಾಯದರ್ಶಿಗೆ ಹೈಕೋರ್ಟ್ 2018ರ ಡಿ.2ರಂದು ನಿರ್ದೇಶಿಸಿತ್ತು. ಈ ಆದೇಶ ಪಾಲಿಸಲು ನ್ಯಾಯಾಲಯದಿಂದ ಪದೇ ಪದೆ ಕಾಲಾವಕಾಶ ಪಡೆದಿದ್ದ ಅಧಿಕಾರಿಗಳು, 2021ರ ನ. 26ರಂದು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬದಲಾಗಿ ಪಶು ಸಂಗೋಪನಾ ಇಲಾಖೆ ಅಮೃತ್‌ಮಹಲ್ ಕಾವಲ್ ಜಾನುವಾರು ಸಂತಾನೋತ್ಪತ್ತಿ ಕೇಂದ್ರದ ಉಪ ನಿರ್ದೇಶಕರು ಪ್ರಮಾಣ ಪತ್ರ ಸಲ್ಲಿಸಿದ್ದರು.