ಕರ್ನಾಟಕ

karnataka

By

Published : Dec 2, 2020, 8:34 PM IST

ETV Bharat / state

ಎನ್ಆರ್​ಐ ಕೋಟಾ ಶೇ 15ರಿಂದ 20ಕ್ಕೆ ಏರಿಕೆ ಪ್ರಶ್ನಿಸಿ ಪಿಐಎಲ್: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿರ್ಧರಿಸುವಿಕೆ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಹಾಗೂ ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.

High Court
ಹೈಕೋರ್ಟ್

ಬೆಂಗಳೂರು: ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿರ್ಧರಿಸುವಿಕೆ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಬೆಂಗಳೂರಿನ ವಕೀಲ ಅಜಯ್ ಕುಮಾರ್ ಪಾಟೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಕಾಯ್ದೆಯಲ್ಲಿನ ನಿಬಂಧನೆಗಳು ಸಂವಿಧಾನದ ವಿಧಿ 14ಕ್ಕೆ ವಿರುದ್ಧವಾಗಿವೆ. ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳು ವಿದ್ಯಾರ್ಥಿಗಳ ಪ್ರವೇಶ ಮತ್ತು ಶುಲ್ಕ ನಿಗದಿ ಸಂಬಂಧ ಅಳವಡಿಸಿಕೊಂಡಿರುವ ನಿಯಮಗಳು ಪಾರದರ್ಶಕವಾಗಿಲ್ಲ ಎಂದು ವಿವರಿಸಿದರು.

ಅನಿವಾಸಿ ಭಾರತೀಯ (ಎನ್ಆರ್​​ಐ) ವಿದ್ಯಾರ್ಥಿಗಳ ಕೋಟಾ ಶೇ 15ರಷ್ಟನ್ನು ಮೀರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದೆಯೇ ಆದೇಶಿಸಿತ್ತು. ಹೀಗಿದ್ದೂ ರಾಜ್ಯದಲ್ಲಿ ಎನ್ಆರ್​ಐ ಕೋಟಾದಡಿ ನೀಡುವ ಸೀಟುಗಳ ಸಂಖ್ಯೆಯನ್ನು ಶೇ 20ಕ್ಕೆ ಹೆಚ್ಚಿಸಿಕೊಳ್ಳಲಾಗಿದೆ. ಇದು ಸುಮಾರು 400 ಕೋಟಿ ರೂ. ಅವ್ಯವಹಾರಕ್ಕೆ ಕಾರಣವಾಗುತ್ತಿದೆ. ಇದೇ ವೇಳೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಹಾಗೂ ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟಕ್ಕೆ ನೋಟಿಸ್ ಜಾರಿ ಮಾಡಿತು. ಈ ಬಗ್ಗೆ ವಿಚಾರಣೆಯನ್ನು 2021ರ ಜನವರಿ 13ಕ್ಕೆ ಮುಂದೂಡಿತು.

ABOUT THE AUTHOR

...view details