ಕರ್ನಾಟಕ

karnataka

ETV Bharat / state

ನೂತನ ಐಟಿ ನಿಯಮಗಳನ್ನು ಪ್ರಶ್ನಿಸಿ ಪಿಐಎಲ್ : ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

ಸಾರ್ವಜನಿಕ ವ್ಯವಸ್ಥೆ, ನೈತಿಕತೆ, ಸಭ್ಯತೆ ಮತ್ತಿತರ ಪದಗಳಿಗೆ ವ್ಯಾಖ್ಯಾನಗಳನ್ನು ಮಾಡಿಲ್ಲ. ಹಾಗಾಗಿ ನಿಯಮದ ಹೆಸರಿನಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್
ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

By

Published : Jul 28, 2021, 5:11 AM IST

ಬೆಂಗಳೂರು : ಸಾಮಾಜಿಕ ಮಾಧ್ಯಮಗಳ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಮಾಹಿತಿ ತಂತ್ರಜ್ಞಾನ ನಿಯಮಗಳು-2021 ನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ವಕೀಲೆ ವಿ. ಚೈತ್ರ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠ, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿತು. ಅಲ್ಲದೇ ಪ್ರತಿವಾದಿಗಳು ಸೆಪ್ಟೆಂಬರ್ 3ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು.

ಅರ್ಜಿದಾರರ ಮನವಿ

ಕೇಂದ್ರ ಸರ್ಕಾರ ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ಇಂಟರ್ಮೀಡಿಯರಿ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ 2021 ಜಾರಿಗೊಳಿಸಿದ್ದು, ಅದರಲ್ಲಿನ ನಿಯಮ 3(1)(ಡಿ) ಸಾಂವಿಧಾನಿಕ ನಿಯಮಗಳಿಗೆ ವಿರುದ್ಧವಾಗಿದೆ. ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟು ಮಾಡಲಿರುವ ಈ ನಿಯಮವನ್ನು ಕಾನೂನುಬಾಹಿರವೆಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಶ್ರೇಯಾ ಸಿಂಘಾಲ್ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ನೀಡಿರುವ ತೀರ್ಪಿನಿಂದ ಹೊರಬರಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಸುಪ್ರೀಂಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿ ರೂಪಿಸಿರುವ 2021ರ ಐಟಿ ನಿಯಮಗಳ ಕುರಿತು ಫೆಬ್ರವರಿ 25ರಂದು ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲಿನ ಸಾರ್ವಜನಿಕ ವ್ಯವಸ್ಥೆ, ನೈತಿಕತೆ, ಸಭ್ಯತೆ ಮತ್ತಿತರ ಪದಗಳಿಗೆ ವ್ಯಾಖ್ಯಾನಗಳನ್ನು ಮಾಡಿಲ್ಲ. ಹಾಗಾಗಿ ನಿಯಮದ ಹೆಸರಿನಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಇದನ್ನು ಓದಿ:ಜೈಲಲ್ಲಿ ಕೂತು ಮೊಬೈಲ್​ನಲ್ಲಿ ಕೋರ್ಟ್ ಕಲಾಪ ವೀಕ್ಷಿಸಿದ ಆರೋಪಿಗಳು: ಹೈಕೋರ್ಟ್ ಅಸಮಾಧಾನ

ABOUT THE AUTHOR

...view details