ಬೆಂಗಳೂರು: ‘ಸರ್ಕಾರ ಮಾಡಬೇಕಾದ ಕೆಲಸವನ್ನು ಕಾನೂನು ಸೇವಾ ಪ್ರಾಧಿಕಾರ ಮಾಡುತ್ತಿದೆ. ಒಂದೊಮ್ಮೆ ಸರ್ಕಾರ ಸರಿಯಾಗಿ ಕೆಲಸ ಮಾಡಿದಿದ್ದರೆ ಇಷ್ಟೊಂದು ಕೇಸ್‌ಗಳು ಕೋರ್ಟ್ ಮುಂದೆ ಬರುತ್ತಿರಲಿಲ್ಲ’, ಎಂದು ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಹೀನಾಯ ಸ್ಥಿತಿ ಸರಿಪಡಿಸುವಂತೆ ಲೆಟ್ಜ್‌ಕಿಟ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ. ಕೆ.ಎಸ್ ಹೇಮಲೇಖ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲೆ ಬಿ.ವಿ ವಿದ್ಯುಲ್ಲತಾ ವಾದ ಮಂಡಿಸಿ, ಶೌಚಾಲಯಗಳ ಸ್ಥಿತಿ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಾಧಿಕಾರ ಸಮೀಕ್ಷೆ ನಡೆಸುತ್ತಿದೆ. ಈ ಕೆಲಸ ಮುಂದುವರಿಸಲು ಪ್ರಾಧಿಕಾರದ ಬಳಿ ಸಿಬ್ಬಂದಿ ಇಲ್ಲ. ಪ್ಯಾರಾ ಲೀಗಲ್ ಸ್ವಯಂ ಸೇವಾ ಕಾರ್ಯಕರ್ತರನ್ನು ಬಳಸಿಕೊಳ್ಳಲು ಅನುಮತಿಸಬೇಕು. ಅವರಿಗೆ ಬಿಬಿಎಂಪಿಯಿಂದ ಸಂಭಾವನೆ ಕೊಡಿಸಬೇಕು. ಏಕೆಂದರೆ, ಬಿಬಿಎಂಪಿ ಮಾಡಬೇಕಾದ ಕೆಲಸ ಪ್ರಾಧಿಕಾರ ಮಾಡುತ್ತಿದೆ. ಬಿಬಿಎಂಪಿಗೆ ದಂಡ ವಿಧಿಸಿದರೆ ಆ ಹಣವನ್ನು ಸಂಭಾವನೆಗೆ ಬಳಸಿಕೊಳ್ಳಬಹುದು ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ಕೆಲಸ ಮಾಡುತ್ತಿಲ್ಲ. ಒಂದೊಮ್ಮೆ ಕೆಲಸ ಮಾಡಿದ್ದರೆ, ಇಷ್ಟೊಂದು ಪ್ರಕರಣಗಳು ಕೋರ್ಟ್ ಮುಂದೆ ಬರುತ್ತಿರಲಿಲ್ಲ. ಸರ್ಕಾರ ಮಾಡಬೇಕಾದ ಕೆಲಸ ಪ್ರಾಧಿಕಾರ ಮತ್ತು ಕೋರ್ಟ್ ಮಾಡಬೇಕಾಗಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.
ಈ ವೇಳೆ ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ವಾದಿಸಿ, ಮಹಿಳಾ ಶೌಚಾಲಯಗಳಿಗೆ ಕಿಟಕಿ ಬಿಟ್ಟಿದ್ದಾರೆ, ಕೆಲವೆಡೆ ಸಾರ್ವಜನಿಕ ಶೌಚಾಲಯಗಳನ್ನು ಅಡುಗೆ ಕೋಣೆಗಳಾಗಿ ಬಳಸಲಾಗಿದೆ. ಈ ಕುರಿತಂತೆ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು. ಬಿಬಿಎಂಪಿ ಪರ ವಕೀಲರು ವಾದಿಸಿ, ಶೌಚಾಲಯಗಳನ್ನು ಮೇಲ್ದರ್ಜೆಗೇರಿಸಲು ಮೂರು ವಾರ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.