ಕರ್ನಾಟಕ

karnataka

By ETV Bharat Karnataka Team

Published : Jan 10, 2024, 7:13 AM IST

ETV Bharat / state

ಎಸ್‌ಜೆಎಂ ವಿದ್ಯಾಪೀಠದಲ್ಲಿ ನೀತಿ ನಿರ್ಧಾರ ಕೈಗೊಳ್ಳದಂತೆ ಮುರುಘಾ ಶರಣರಿಗೆ ಹೈಕೋರ್ಟ್ ಸೂಚನೆ

ಮುರುಘಾ ಶರಣರು ಎಸ್‌ಜೆಎಂ ವಿದ್ಯಾಪೀಠದ ನೀತಿ, ನಿರ್ಧಾರ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದಂತೆ ಹೈಕೋರ್ಟ್​ ತಿಳಿಸಿದೆ.

high-court-instructs-murugha-sharan-not-to-take-decisions-in-sjm-vidyapeetha
ಎಸ್‌ಜೆಎಂ ವಿದ್ಯಾಪೀಠದಲ್ಲಿ ನೀತಿ ನಿರ್ಧಾರ ಕೈಗೊಳ್ಳದಂತೆ ಮುರುಘಾ ಶರಣರಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು :ಚಿತ್ರುದುರ್ಗದ ಎಸ್‌ಜೆಎಂ ವಿದ್ಯಾಪೀಠದ ದೈನಂದಿನ ವ್ಯವಹಾರಗಳನ್ನು ಹೊರತುಪಡಿಸಿ ಯಾವುದೇ ನೀತಿ-ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಮೌಖಿಕವಾಗಿ ಸೂಚನೆ ನೀಡಿದೆ.

ಪೋಕ್ಸೊ ಪ್ರಕರಣದ ಆರೋಪಿಯಾಗಿರುವ ಶಿವಮೂರ್ತಿ ಶರಣರು ಜಾಮೀನು ಮೇಲೆ ಜೈಲಿನಿಂದ ಹೊರಬಂದ ನಂತರ ಮಠದ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ ಹೈಕೋರ್ಟ್ ಆದೇಶದ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾಪೀಠದ ಆಡಳಿತ ಮಂಡಳಿ ನಿರ್ದೇಶಕ ಆರ್ ನಾಗರಾಜ್ ಹೈಕೋರ್ಟ್‌ಗೆ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾಗಿದ್ದ ಶರಣರ ಪರ ವಕೀಲರು, ವಿದ್ಯಾಪೀಠದ ನೀತಿ ನಿರ್ಧಾರ ವಿಷಯದಲ್ಲಿ ಶರಣರು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂಬುದಾಗಿ ಭರವಸೆ ನೀಡಿದರು.

ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಶರಣರು ವಿದ್ಯಾಪೀಠದ ನೀತಿ, ನಿರ್ಧಾರ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಕೇವಲ ವಿದ್ಯಾಪೀಠದ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಬಹುದು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಕೀಲರು, ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಶರಣರು ನ್ಯಾಯಾಂಗ ಬಂಧನದಿಂದ ಹೊರಬಂದ ನಂತರ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡಿದ್ದಾರೆ. ಆ ಮೂಲಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ ನೀಡಿರುವ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬುದಾಗಿ ನ್ಯಾಯಪೀಠಕ್ಕೆ ತಿಳಿಸಿದರು.

ಆ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದು, ದೋಷಾರೋಪಗಳಿಂದ ಮುಕ್ತರಾಗುವ ತನಕ ದೂರ ಇರುವುದು ಸೂಕ್ತ. ಜಿಲ್ಲಾ ಪ್ರಧಾನ ನ್ಯಾಯಾಧೀಶರು ಉಸ್ತುವಾರಿ ವಹಿಸುವಂತೆ ಇದೇ ಕೋರ್ಟ್​ ತಿಳಿಸಿತ್ತು. ಒಂದು ವೇಳೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಸಮರ್ಪಕವಾಗಿ ಕಾರ್ಯಭಾರ ಮಾಡುತ್ತಿಲ್ಲ ಎಂದಾದರೆ ಅದನ್ನು ನೋಡಿಕೊಳ್ಳಲು ಹೈಕೋರ್ಟ್ ಗಮನಕ್ಕೆ ತರಬಹುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ವಕೀಲ ವೃತ್ತಿ ಮುಂದುವರೆಸಲು ನಿರ್ಬಂಧಿಸಿದ್ದ ಆದೇಶ ರದ್ದುಪಡಿಸಿದ ಹೈಕೋರ್ಟ್

ABOUT THE AUTHOR

...view details