ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು ಹಳೆಯ ಆಸ್ತಿಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಗೆ ಅಳವಡಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಬೆಂಗಳೂರಿನ ಪದ್ಮನಗರದ ಅಸ್ಲಾಂ ಪಾಷಾ ಅವರು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ (ಸ್ಯಾಂಕ್ಷನ್ ಪ್ಲಾನ್) ಸಲ್ಲಿಸಿಲ್ಲ, ಹೀಗಾಗಿ ಕಟ್ಟಡ ನಿರ್ಮಾಣ ಅಕ್ರಮ ಎಂದು ಬಿಬಿಎಂಪಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ.
ಅಲ್ಲದೇ, ಈ ಪ್ರಕ್ರಿಯೆಯಿಂದ ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ವಿದ್ಯುನ್ಮಾನ ಅಥಾವ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿವೆ. ಇದಕ್ಕಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಇ - ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಜೊತೆಗೂಡಿ ಯೋಜನೆಯೊಂದನ್ನು ರೂಪಿಸಬೇಕು ಎಂದು ನಿರ್ದೇಶನ ನೀಡಿದೆ. ಆಸ್ತಿಗಳ ಕ್ರಿಯಾ ಯೋಜನೆಗಳು, ಖಾತೆ, ಸರ್ಟಿಫಿಕೇಟ್ಗಳು, ತೆರಿಗೆ ಪಾವತಿಸಿದ ರಸೀದಿಗಳು, ಸ್ವ ಮೌಲ್ಯಮಾಪನ ಫಾರ್ಮ್ ಇತ್ಯಾದಿ, ಕಾಯಿದೆಯ ಅನ್ವಯ ಯಾವುದೇ ನಿರ್ದಿಷ್ಟ ಆಸ್ತಿಯ ಸಂಬಂಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗೆ ಯೂಸರ್ ನೇಮ್ ಮತ್ತು ಪಾಸ್ಪಾರ್ಡ್ ನೀಡಬೇಕು. ಇದರಿಂದ ಅದು ಮೂರನೇ ವ್ಯಕ್ತಿಗೆ ಲಭ್ಯವಾಗುವುದಿಲ್ಲ. ಇದೆಲ್ಲವನ್ನೂ ಒಳಗೊಂಡ ವ್ಯವಸ್ಥೆ ರೂಪಿಸಲು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಸಮನ್ವಯ ಸಾಧಿಸಬೇಕು ಎಂದು ಎಂದು ನ್ಯಾಯಪೀಠ ಸೂಚಿಸಿದೆ.
ಪಾಲಿಕೆ ವ್ಯಾಪ್ತಿಯ ಎಲ್ಲ ಹಳೆಯ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ತಂದು ಎಲ್ಲ ಅಧಿಕಾರಿಗಳಿಗೆ ಲಭ್ಯವಾಗುವಂತೆ ಜಾರಿಗೊಳಿಸಬೇಕು. ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಕಂದಾಯ, ನಗರಾಭಿವೃದ್ಧಿ ಇಲಾಖೆ, ಯೋಜನಾ ಪ್ರಾಧಿಕಾರ, ಉಪ ನೋಂದಣಾಧಿಕಾರಿ ಕಚೇರಿ ಇತ್ಯಾದಿಗೆ ಲಭ್ಯವಾಗವಾಗಬೇಕು. ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಮ್ಯಾಪ್ ಮಾಡಿ ಅದನ್ನು ಆ ಆಸ್ತಿಯ ಜೊತೆ ಸೇರ್ಪಡೆ ಮಾಡಬೇಕು. ಹೀಗೆ ಮಾಡುವುದರಿಂದ ಯಾವುದೇ ಒಂದು ಆಸ್ತಿಗೆ ಸಂಬಂಧಿಸಿದ ದಾಖಲೆಯು ಬಿಬಿಎಂಪಿ ಕಾಯಿದೆಯ ಅನ್ವಯ ಕ್ರಮಕೈಗೊಳ್ಳಬೇಕಾದ ಅಧಿಕಾರಿಗೆ ಸುಲಭವಾಗಿ ಲಭ್ಯವಾಗಲಿದೆ.