ಬೆಂಗಳೂರು: ರಾಜ್ಯದ ವಿವಿಧ ಪಕ್ಷಗಳ ರಾಜಕೀಯ ನಾಯಕರಿಗೆ ಸಂಬಂಧಿಸಿದ ಹಲವು ಪ್ರಕರಣಗಳ ಕುರಿತು ಕಳೆದ ಒಂದು ವರ್ಷದಲ್ಲಿ ಹೈಕೋರ್ಟ್ ಮಹತ್ವದ ಆದೇಶಗಳನ್ನು ನೀಡಿವೆ. ಆ ಪ್ರಮುಖ ತೀರ್ಪುಗಳು ಇಲ್ಲಿವೆ.
- ಭಾರತ್ ಜೋಡೋ ಯಾತ್ರೆಯಲ್ಲಿ ಕೃತಿಸ್ವಾಮ್ಯ ಉಲ್ಲಂಘನೆ ಮಾಡಿ ಕೆಜಿಎಫ್ ಹಾಡು ಬಳಕೆ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಮತ್ತಿತರರ ವಿರುದ್ಧದ ಪ್ರಕರಣ ರದ್ದು ಪಡಿಸಲು ಹೈಕೋರ್ಟ್ ನಿರಾಕರಣೆ.
- ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಸರ್ಕಾರದ ಕ್ರಮ ಎತ್ತಿ ಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಅರ್ಜಿ ಹಿಂಪಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.
- ಬೆಂಗಳೂರಿನ ಹಳಗೇವಡೇರನಹಳ್ಳಿಯಲ್ಲಿ 2.5 ಎಕರೆ ಭೂಮಿ ಡಿನೋಟಿಫೈ ಮಾಡಿದ್ದ ಕುರಿತು ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರ (ಸಿಎಜಿ) ವರದಿ ಆಧರಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಿ ಆದೇಶ.
- ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಸಚಿವ ಜಮೀರ್ ಅಹ್ಮದ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣಾ ದಳ (ಎಸಿಬಿ) ಪ್ರಸ್ತುತ ಲೋಕಾಯುಕ್ತ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿ ಆದೇಶ.
- ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಪ್ರಜ್ವಲ್ ರೇವಣ್ಣ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ ಹಿನ್ನೆಲೆಯಲ್ಲಿ ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಿ ಆದೇಶಿಸಿ ಆದೇಶ.
- ಚುನಾವಣಾ ಅಕ್ರಮ ಆರೋಪದ ಮೇಲೆ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿರುವುದನ್ನು ಅಸಿಂಧುಗೊಳಿಸಿ ಹೊರಡಿಸಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವವರೆಗೂ ತಡೆಯಾಜ್ಞೆ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಮಧ್ಯಂತರ ಅರ್ಜಿ ವಜಾಗೊಳಿಸಿ ಆದೇಶ.
- ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್ಡಿಎಲ್) ಟೆಂಡರ್ಗಾಗಿ ಲಂಚ ಪಡೆದ ಆರೋಪದಲ್ಲಿ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶ.
- ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತವರ ಕುಟುಂಬಸ್ಥರಿಗೆ ಸೇರಿದ 19 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಗಳ ಮುಟ್ಟುಗೋಲಿಗೆ ಸರ್ಕಾರ ಅನುಮತಿ ನೀಡಿರುವುದಾಗಿ ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ.
- ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರು 30 ದಿನಗಳ ಕಾಲ ಧಾರವಾಡದಲ್ಲಿರಲು ಅನುಮತಿ ನೀಡುವಂತೆ ಕೋರಿದ್ದ ಅರ್ಜಿ ವಜಾ ಮಾಡಿ ಆದೇಶ.
- ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ವಿರುದ್ಧದ ಸುಮಾರು 3.25 ಕೋಟಿ ರೂ.ಗಳ ಬ್ಯಾಂಕ್ ಸಾಲದ ವಂಚನೆ ಪ್ರಕರಣದ ದೋಷಾರೋಪ ಪಟ್ಟಿ ರದ್ದುಪಡಿಸಲು ನಿರಾಕರಣೆ.
- ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಭಯ್ ಕುಮಾರ್ ಪಾಟೀಲ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರು ರದ್ದುಪಡಿಸಿ ಆದೇಶಿಸಿದೆ.
- ತೋಟದ ಮನೆಯಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಪೋಷಣೆ ಮಾಡುತ್ತಿದ್ದ ಆರೋಪದಲ್ಲಿ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರ ವಿರುದ್ಧ ವನ್ಯಜೀವಿ ಸಂಕ್ಷಣೆ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿ ಆದೇಶ.
- ಡಿ.ಕೆ. ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸರ್ಕಾರ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ಆದೇಶ ಪ್ರಶ್ನಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ಅರ್ಜಿ.
- ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮುಖ್ಯ ಸಲಹೆಗಾರ, ಮಾಧ್ಯಮ ಸಲಹೆಗಾರರಾಗಿ ನೇಮಕ ಮಾಡಿ ಸಂಪುಟ ದರ್ಜೆ ಸ್ಥಾನಮಾನ ನೀಡಿದ ಕ್ರಮ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿ ಆದೇಶ.
- ಸಾಮಾನ್ಯ ವರ್ಗದಿಂದ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ವ್ಯಕ್ತಿ, ಸರ್ಕಾರ ಮೀಸಲು ನಿಗದಿ ಪಡಿಸಿದ ಜಾತಿಗೆ ಸೇರಿದ್ದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಅಡಿ ಸ್ಪರ್ಧೆ ಮಾಡಲು ಹೈಕೋರ್ಟ್ ಅವಕಾಶ.