ಬೆಂಗಳೂರು :ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ನಷ್ಟ ಅಂದಾಜಿಸಿ ಹೊಣೆಗಾರಿಕೆ ನಿಗದಿಪಡಿಸಲು ನೇಮಿಸಿರುವ ಕ್ಲೇಮ್ ಕಮಿಷನರ್ ಅವರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿರುವ ಕುರಿತಂತೆ ವಿವರಗಳನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿ ಎಂದು ಹೈಕೋರ್ಟ್ ಕ್ಲೇಮ್ ಕಮಿಷನ್ ಕಾರ್ಯದರ್ಶಿಗೆ ನಿರ್ದೇಶಿಸಿದೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೇಮ್ ಕಮಿಷನರ್ ನೇಮಕ ಮಾಡಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಕೆಲಕಾಲ ವಾದ ಆಲಿಸಿದ ಪೀಠ, ಗಲಭೆ ವೇಳೆ ಉಂಟಾಗಿರುವ ನಷ್ಟ ಅಂದಾಜಿಸಿ ಹೊಣೆಗಾರಿಕೆ ನಿಗದಿಪಡಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್ ಎಸ್ ಕೆಂಪಣ್ಣ ಅವರನ್ನು ಕ್ಲೇಮ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಅದರಂತೆ ಕಮಿಷನ್ಗೆ ಅಗತ್ಯ ಸಿಬ್ಬಂದಿ, ಕಚೇರಿ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ.
ಅದ್ದರಿಂದ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಸೇರಿ ಕ್ಲೇಮ್ ಕಮಿಷನರ್ಗೆ ನೀಡಿರುವು ಮೂಲಸೌಕರ್ಯಗಳ ವಿವರಗಳನ್ನು ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ಸಲ್ಲಿಸುವಂತೆ ಕ್ಲೇಮ್ ಕಮಿಷನ್ನ ಕಾರ್ಯದರ್ಶಿಗೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿತು. ಇದೇ ವೇಳೆ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎಸ್ಐಟಿ)ಗೆ ಪೀಠ ನಿರ್ದೇಶಿಸಿತು.
ಓದಿ:ಸಿಡಿ ಕೇಸ್ನಲ್ಲಿ ಯುವತಿ ಬಂಧಿಸದಂತೆ ಮನವಿ : ಕೋರಿಕೆ ಪುರಸ್ಕರಿಸದ ಹೈಕೋರ್ಟ್