ಬೆಂಗಳೂರು: ಕಾವೇರಿ ನಿರಾವರಿ ನಿಗಮದ ಅಧ್ಯಕ್ಷರಾಗಿದ್ದ ಚಿಕ್ಕರಾಯಪ್ಪನವರ ಅಕ್ರಮ ಆಸ್ತಿ ಸಕ್ರಮಗೊಳಿಸಲು ನೆರವಾದ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಹಾಗೂ ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಆರ್. ಸೀತಾರಾಮ್ ವಿರುದ್ಧ ಭ್ರಷ್ಟಾಚಾರ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತು. ತಮ್ಮ ವಿರುದ್ಧದ ಪ್ರಕರಣ ರದ್ದತಿ ಕೋರಿ ಸೀತಾರಾಮ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪ ಸಂಬಂಧ ಎಸಿಬಿ 2018ರ ಮೇ ತಿಂಗಳಲ್ಲಿ 15 ದಿನಗಳ ಅಂತರದಲ್ಲಿ ಎರಡು ನೋಟಿಸ್‌ಗಳನ್ನು ನೀಡಿದೆ. ಮೊದಲ ನೋಟಿಸ್‌ಗೆ ಪ್ರತಿಕ್ರಿಯಿಸಿ, ಚಿಕ್ಕರಾಯಪ್ಪ (ಪ್ರಕರಣದ ಮೊದಲ ಆರೋಪಿ) ಅವರ ಮಗಳ ಶಿಕ್ಷಣಕ್ಕಾಗಿ ಬಡ್ಡಿರಹಿತ ಸಾಲ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ, ಎರಡನೇ ನೋಟಿಸ್‌ಗೆ ಸಾಲ ಮಂಜೂರು ಮಾಡಿದ್ದ ಸೊಸೈಟಿ ನಿಷ್ಕ್ರಿಯವಾಗಿದ್ದು, ಹಳೆಯ ದಾಖಲೆಗಳು ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆ ಅತ್ಯಂತ ವಿಚಿತ್ರವೂ ಮತ್ತು ಆಘಾತಕಾರಿಯಾಗಿದೆ ಎಂದು ಪೀಠ ಹೇಳಿತು.
ಸೊಸೈಟಿ ಸ್ವಾತಂತ್ರ ಸಂಸ್ಥೆಯಾಗಿದ್ದು, ಸೀತಾರಾಮ್ ಅವರು ಸೊಸೈಟಿಯ ಅಧ್ಯಕ್ಷರಾಗಿ 50 ಲಕ್ಷ ರೂ.ಗಳ ಚೆಕ್‌ಗೆ ಸಹಿ ಹಾಕಿದ್ದಾರೆ. ಈ 50 ಲಕ್ಷ ರೂಗಳು ಎಲ್ಲಿಂದ ಬಂದಿದೆ, ವಿಶೇಷವಾಗಿ ಕೇವಲ ಚಿಕ್ಕರಾಯಪ್ಪ ಮಗಳ ಶಿಕ್ಷಣಕ್ಕಾಗಿ ಬಡ್ಡಿ ರಹಿತ ಶೈಕ್ಷಣಿಕ ಸಾಲವನ್ನು ನೀಡಲು ಏಕೆ ಆಯ್ಕೆ ಮಾಡಿಕೊಂಡರು ಎಂಬುದಕ್ಕೆ ಸಂಬಂಧಿಸಿದಂತೆ ಸೂಕ್ತ ವಿವರಣೆ ನೀಡಿಲ್ಲ. ಪ್ರಸ್ತುತ ಸೊಸೈಟಿ ನಿಷ್ಕ್ರಿಯೆಗೊಂಡಿದೆ. ಆದರೂ, ನ್ಯಾಯಾಲಯಕ್ಕೆ ಹಣ ವಹಿವಾಟು ನಡೆಸಿರುವ ಸಂಬಂಧ ದಾಖಲೆಗಳು ಅತ್ಯಂತ ಮುಖ್ಯವಾಗಿರುತ್ತದೆ. ಈ ಎಲ್ಲ ಗಂಭೀರವಾದ ಪ್ರಶ್ನೆಗಳಿಗೆ ನ್ಯಾಯಾಲಯಕ್ಕೆ ಸೂಕ್ತ ರೀತಿಯ ಪ್ರತಿಕ್ರಿಯೆ ಅಗತ್ಯವಿದ್ದು, ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ಟಿ.ಎನ್. ಚಿಕ್ಕರಾಯಪ್ಪ ಅವರು ಕಾವೇರಿ ನಿರಾವರಿ ನಗಮ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಅಕ್ರಮ ಆಸ್ತಿ ಗಳಿಕೆ ಸಂಬಂಧ ಆರೋಪ ಎದುರಾಗಿತ್ತು. ಈ ಕುರಿತಂತೆ ಚಿಕ್ಕರಾಯಪ್ಪ ಮತ್ತು ಅವರ ಆಪ್ತರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿ ಸುಮಾರು 3.58 ಕೋಟಿ ರೂ.ಗಳ ಅಕ್ರಮ ಆಸ್ತಿ ವಶಕ್ಕೆ ಪಡೆದಿತ್ತು.