ಬೆಂಗಳೂರು:ಹಿಂದುಳಿದ ವರ್ಗಗಳ ಜಾತಿ (ಮೊಗೇರ್)ಗೆ ಸೇರಿದ್ದರೂ ಪರಿಶಿಷ್ಟ ಜಾತಿ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಅಡಿ ಸಹಾಯಕ ಕನ್ನಡ ಶಿಕ್ಷಕರ ಹುದ್ದೆ ಪಡೆಯಲು ಮುಂದಾಗಿದ್ದ ಶಿಕ್ಷಕಿಯೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬಂಗೆರೆ ನಿವಾಸಿ ಸರಸ್ವತಿ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ದಾಖಲೆಗಳನ್ನು ಪರಿಶೀಲಿಸಿ ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ಹಿಂದುಳಿದ ವರ್ಗಗಳಿಗೆ ಸೆರಿದ್ದು, ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ತಪ್ಪೆಸಗಿರುವ ಅಂಶ ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಲಾಗದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?ಅರ್ಜಿದಾರರು ಮೊಗೇರ್ (ಹಿಂದುಳಿದ ವರ್ಗಗಳು) ಜಾತಿಗೆ ಸೇರಿದ್ದರೂ ಪರಿಶಿಷ್ಟ ಜಾತಿ ಹೆಸರಿನ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಆದರೆ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನಡೆಸಿದ ಪರಿಶೀಲನೆ ಸಂದರ್ಭದಲ್ಲಿ ಮೇಲ್ಮನವಿದಾರರ ಮೊಗೇರಾ ಜಾತಿಗೆ ಸೇರಿದವರಾಗಿದ್ದು, ಪರಿಶಿಷ್ಟ ಜಾತಿ ಹೆಸರಿನಲ್ಲಿ ತಹಶೀಲ್ದಾರ್ ಕಚೇರಿಗೆ ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ತಕ್ಷಣ ತಹಶೀಲ್ದಾರ್ ಅವರು ಅರ್ಜಿದಾರರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿದ್ದರು. ಇದಾದ ನಂತರ ಜಿಲ್ಲಾ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಕಾಯಿದೆಯಡಿ ದೂರು ದಾಖಲಿಸಿದ್ದರು.