ಕರ್ನಾಟಕ

karnataka

ETV Bharat / state

ಎಪಿಪಿ ನೇಮಕಾತಿ ಅಕ್ರಮ ಆರೋಪ : ಎಸ್.ಆರ್​​​ ಹಿರೇಮಠ್ ನಡೆ ಖಂಡಿಸಿದ ಹೈಕೋರ್ಟ್ - ಹಿರೇಮಠ್ ನಡೆ ಖಂಡಿಸಿದ ಹೈಕೋರ್ಟ್

ಇಂತಹ ಬೇಜವಾಬ್ದಾರಿ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಹೀಗಾಗಿ, ನ್ಯಾಯಾಲಯ ಅರ್ಜಿದಾರರ ವಿರುದ್ಧ ಕಾನೂನು ರೀತಿ ಕ್ರಮ ಜರಗಿಸುವ ಕುರಿತು ಯೋಚಿಸಬೇಕಿದೆ. ದಂಡ ವಿಧಿಸುವ ಜತೆಗೆ ಮುಂದೆ ಪಿಐಎಲ್ ಸಲ್ಲಿಸದಂತೆ ನಿರ್ಬಂಧ ಹೇರುವ ಆಯ್ಕೆಗಳನ್ನು ನ್ಯಾಯಾಲಯ ಪರಿಗಣಿಸಬೇಕಾಗುತ್ತದೆ ಎಂದು ಕಟುವಾಗಿ ನುಡಿಯಿತು..

high-court-condemns-sr-hiremath-negligence
ಎಸ್ ಆರ್​​​ ಹಿರೇಮಠ್

By

Published : Jul 30, 2021, 9:25 PM IST

ಬೆಂಗಳೂರು :ಸರ್ಕಾರಿ ಅಭಿಯೋಜನಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಅವರ ನಡೆಯನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ.

2013-14ನೇ ಸಾಲಿನಲ್ಲಿ ನಡೆದ 197 ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಎಸ್.ಆರ್. ಹಿರೇಮಠ್ ಹಾಗೂ ವಕೀಲೆ ಸುಧಾ ಕಟ್ವಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ ಪೀಠಕ್ಕೆ ಮಾಹಿತಿ ನೀಡಿ, ಮೊದಲನೇ ಅರ್ಜಿದಾರರಾದ ಎಸ್.ಆರ್ ಹಿರೇಮಠ ಅವರು ಸಂಪರ್ಕಕ್ಕೂ ಸಿಗುತ್ತಿಲ್ಲ, ಕೋರ್ಟ್ ಶುಲ್ಕವನ್ನೂ ಪಾವತಿಸುತ್ತಿಲ್ಲ. ಈ ಅರ್ಜಿ ಸಿದ್ಧಪಡಿಸಲು ಆರು ತಿಂಗಳು ಶ್ರಮಪಟ್ಟಿದ್ದೇವೆ. ಆದರೆ, ಅವರು ತಮಗೆ ಅಗತ್ಯ ಸಹಕಾರವನ್ನೇ ನೀಡುತ್ತಿಲ್ಲ. ಹೀಗಾಗಿ, ತಾವು ಅರ್ಜಿಯಿಂದ ನಿವೃತ್ತಿ ಪಡೆಯಲು ಮೆಮೊ ಸಲ್ಲಿಸಿದ್ದು, ಅದನ್ನು ಪರಿಗಣಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿ ಸಿದ್ದಪಡಿಸಲು ಎಷ್ಟು ಸಮಯ ವ್ಯಯಿಸಲಾಗಿದೆ ಎಂಬುದು ನಿಮ್ಮ ಮತ್ತು ಅರ್ಜಿದಾರರ ನಡುವಿನ ವಿಚಾರ. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನಂತರ ಉಪೇಕ್ಷೆ ಮಾಡುವುದು, ಕೋರ್ಟ್ ವಿಚಾರಣೆಗೆ ಸ್ಪಂದಿಸದಿರುವುದು ನಿಜಕ್ಕೂ ಬೇಜವಾಬ್ದಾರಿ ನಡೆ. ನಮ್ಮ ಕಣ್ಣ ಮುಂದೆಯೇ ಈ ರೀತಿ ನಡೆದುಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.

ಅಲ್ಲದೇ, ಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ. ಆದರೆ, ಅರ್ಜಿದಾರರು ಈವರೆಗೆ ಪ್ರಕ್ರಿಯೆ ಶುಲ್ಕವನ್ನೇ ಪಾವತಿಸಿಲ್ಲ. ಮತ್ತೊಂದೆಡೆ ವಕೀಲರಿಗೂ ಸಹಕಾರ ನೀಡುತ್ತಿಲ್ಲ. ಇವನ್ನು ಗಮನಿಸಿದರೆ ಅರ್ಜಿದಾರರಿಗೆ ವಿಷಯದ ಗಂಭೀರತೆ ಇಲ್ಲವೆಂದು ಕಾಣುತ್ತದೆ.

ಇಂತಹ ಬೇಜವಾಬ್ದಾರಿ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಹೀಗಾಗಿ, ನ್ಯಾಯಾಲಯ ಅರ್ಜಿದಾರರ ವಿರುದ್ಧ ಕಾನೂನು ರೀತಿ ಕ್ರಮ ಜರಗಿಸುವ ಕುರಿತು ಯೋಚಿಸಬೇಕಿದೆ. ದಂಡ ವಿಧಿಸುವ ಜತೆಗೆ ಮುಂದೆ ಪಿಐಎಲ್ ಸಲ್ಲಿಸದಂತೆ ನಿರ್ಬಂಧ ಹೇರುವ ಆಯ್ಕೆಗಳನ್ನು ನ್ಯಾಯಾಲಯ ಪರಿಗಣಿಸಬೇಕಾಗುತ್ತದೆ ಎಂದು ಕಟುವಾಗಿ ನುಡಿಯಿತು.

ಕೊನೆಯಲ್ಲಿ ಅರ್ಜಿದಾರ ಹಿರೇಮಠ್ ಅವರಿಗೆ ನೋಟಿಸ್ ನೀಡುವಂತೆ ನಿರ್ದೇಶಿಸಿತು. ಜತೆಗೆ, ಕೋರ್ಟ್ ಆದೇಶವನ್ನು ವಕೀಲರು ಅವರ ಗಮನಕ್ಕೆ ತರಬೇಕು. ಹಿರೇಮಠ ಅವರು ಮುಂದಿನ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂದು ಪೀಠ ತಾಕೀತು ಮಾಡಿ ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿತು.

ABOUT THE AUTHOR

...view details