ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಮಂಡಳಿ (ಬೋರ್ಡ್) ಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದು ಪಡಿಸಿದೆ. ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘ(ಕುಸ್ಮಾ), ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ, ಮಾನ್ಯತೆ ಪಡೆದ ಅನುದಾನ ರಹಿತ ಶಿಕ್ಷಣಗಳ ಸಂಘ (ಓಯುಆರ್‌ಎಸ್) ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರುರ ಅವರಿದ್ದ ನ್ಯಾಯಪೀಠ ಸರ್ಕಾರದ ಸುತ್ತೋಲೆಯನ್ನು ರದ್ದು ಪಡಿಸಿ ಆದೇಶಿಸಿದೆ.
ಅಲ್ಲದೆ, ಸರ್ಕಾರ ಸುತೋಲೆ ಹೊರಡಿಸಿದರ ಹಿಂದಿನ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನ್ಯಾಯಪೀಠ, ಈ ರೀತಿಯ ಸುತ್ತೋಲೆ ಹೊರಡಿಸುವ ವೇಳೆ ಸರ್ಕಾರ ಅನುಸರಿಸಿದ ಪ್ರಕ್ರಿಯೆ ಮತ್ತು ವಿಧಾನವೇ ಸೂಕ್ತವಾಗಿಲ್ಲ ಎಂದು ತಿಳಿಸಿದೆ. ಅಲ್ಲದೆ, ಸರ್ಕಾರ ತನ್ನ ಉದ್ದೇಶವನ್ನು ಜಾರಿಗೊಳಿಸಲು ಅನುಸರಿಸಿದ ಕಾರ್ಯ ವಿಧಾನವೇ ಸೂಕ್ತವಾಗಿಲ್ಲ ಎಂಬುದಾಗಿ ಕಂಡುಬಂದಿದೆ. ಆದಾಗ್ಯೂ, ಅಂತಹ ಕಾರ್ಯ ವಿಧಾನವನ್ನು ಜಾರಿಗೆ ತರುವಾಗ, ರಾಜ್ಯ ಸರ್ಕಾರ ಅಥವಾ ಶಾಲೆಗಳು ಶಾಸನದ ಅಡಿಯಲ್ಲಿ ನಿಗದಿಪಡಿಸಿದ ನಿಯಮ ಹಾಗೂ ಪ್ರಕ್ರಿಯೆಯನ್ನು ಅಗತ್ಯವಾಗಿ ಅನುಸರಿಸಬೇಕು. ಯಾವುದೇ ಯೋಜನೆ ಕುರಿತು ಸುತ್ತೋಲೆ ಹೊರಡಿಸಿದಾಗ, ಅದು ಶಾಸನಾತ್ಮಕವಾಗಿಯೇ ಇರಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಜೊತೆಗೆ, ಸರ್ಕಾರ ಹೊರಡಿಸಿದ ಸುತ್ತೋಲೆಯು ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿದೆ. ಇಂತಹ ಸುತ್ತೋಲೆಗಳನ್ನು ಕಾಯ್ದೆ ಅಥವಾ ನಿಯಮಗಳಿಗೆ ಪೂರಕವಾಗಿರಬೇಕು ಹೊರತು ಅತಿಕ್ರಮಿಸುವಂತೆ ಅಲ್ಲ. ಒಂದೊಮ್ಮೆ ಸುತ್ತೋಲೆಗಳು ನಿಯಮಗಳನ್ನು ಅತಿಕ್ರಮಿಸುವಂತೆ ಇದ್ದರೆ ರದ್ದುಪಡಿಸಲು ಅರ್ಹವಾಗಿರುತ್ತವೆ. ಸರ್ಕಾರದ ಸುತ್ತೋಲೆ ಆರ್‌ಟಿಇ ಕಾಯ್ದೆಯ ಸೆಕ್ಷನ್ 16ರ ವಿರುದ್ಧವಾಗಿದೆ. ಸುತ್ತೋಲೆ ಹೊರಡಿಸುವ ಮುನ್ನ ಸರ್ಕಾರವು ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಈ ವಿಷಯವನ್ನು ರಾಜ್ಯ ಶಾಸಕಾಂಗದ ಮುಂದೆ ಮಂಡಿಸಿಲ್ಲ ಎಂದು ಹೇಳಿದೆ.