ಬೆಂಗಳೂರು :ಮಹಾದಾಯಿ ನ್ಯಾಯಾಧಿಕರಣ ತೀರ್ಪು ವಿರೋಧಿಸಿ 2018ರಲ್ಲಿ ಕರೆ ನೀಡಿದ್ದ ಕರ್ನಾಟಕ ಬಂದ್ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ 2019ರಲ್ಲಿ ನಡೆದ ಪ್ರತ್ಯೇಕ ಬಂದ್ಗಳಿಂದ ಆಗಿರುವ ಸಾರ್ವಜನಿಕ ಆಸ್ತಿ ನಷ್ಟವನ್ನು ಕರೆ ನೀಡಿದವರಿಂದ ವಸೂಲಿ ಮಾಡುವ ಸಂಬಂಧ ಹೈಕೋರ್ಟ್ ನಿರ್ದೇಶನಗಳ ಪ್ರಕಾರ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ಸಲ್ಲಿಕೆಯಾಗಿರುವ ಎರಡು ಪ್ರತ್ಯೇಕ ಪಿಐಎಲ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಎರಡೂ ಬಂದ್ಗಳ ವೇಳೆ ಉಂಟಾದ ಸಾರ್ವಜನಿಕ ಆಸ್ತಿ ನಷ್ಟದ ಪ್ರಮಾಣ ಅಂದಾಜಿಸಲು ಪ್ರತ್ಯೇಕ ಕ್ಲೇಮು ಕಮಿಷನರ್ಗಳನ್ನು ನೇಮಕ ಮಾಡಲಾಗಿದೆ.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ ನಡೆದ ಬಂದ್ನಿಂದ ಆಗಿರುವ ನಷ್ಟ ಅಂದಾಜಿಸಲು ನೇಮಿಸಿರುವ ಕ್ಲೇಮ್ ಕಮಿಷನರ್ ರಾಮನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಅಗತ್ಯ ಕಚೇರಿ ಮತ್ತು ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.