ಬೆಂಗಳೂರು :ಥಾಯ್ಲೆಂಡ್‌ನಲ್ಲಿ ತಂದೆ, ಜರ್ಮನಿಯಲ್ಲಿ ತಾಯಿ ನೆಲೆಸಿದ್ದು, ಯಾರ ಬಳಿಯಲ್ಲಿ ತಾನು ಬೆಳೆಯಬೇಕೆಂಬ ಸಂದಿಗ್ದ ಪರಿಸ್ಥಿತಿಗೆ ಸಿಲುಕಿದ್ದ ಅಪ್ರಾಪ್ತ ಮಗನಿಗೆ ಹೈಕೋರ್ಟ್ ಪರಿಹಾರ ಕಂಡುಕೊಂಡಿದೆ. ಒಂಬತ್ತು ವರ್ಷದ ಬಾಲಕನೊಂದಿಗೆ ನ್ಯಾಯಮೂರ್ತಿಗಳು ಖಾಸಗಿಯಾಗಿ ಸುದೀರ್ಘವಾಗಿ ಚರ್ಚೆ ನಡೆಸಿದ್ದು, ಆತನ ಆಶಯದಂತೆ ತಂದೆಯೊಂದಿಗೆ ಬೆಳೆಯಲು ಅವಕಾಶ ಕಲ್ಪಿಸಲಾಗಿದೆ.
ಪತಿಯ ಬಳಿಯಲ್ಲಿದ್ದ ಮಗನನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಕೋರಿ ಒಡಿಶಾ ಮೂಲದ ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ. ಭಾರತದ ಕಾನೂನಿನಲ್ಲಿ ಮಗುವಿನ ಶಿಕ್ಷಣ ಸೇರಿದಂತೆ ಕ್ಷೇಮ ಮುಖ್ಯವಾಗಿದೆ. ಆ ದೃಷ್ಟಿಕೋನದಲ್ಲಿ ಬಾಲಕನ ಜೊತೆ ಚರ್ಚೆ ನಡೆಸಿದ ಬಳಿಕ, ಆತನ ಇಚ್ಚೆಯಂತೆ ಈ ನಿರ್ಧಾರ ಕೈಗೊಂಡಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ತಾಯಿಯಾದವರು ಮಗುವಿನ ರಕ್ಷಣೆಗಿಂತಲೂ ಜರ್ಮನಿಯಲ್ಲಿ ವೃತ್ತಿಜೀವನ ಮುಂದುವರೆಸುವ ಕುರಿತು ಹೆಚ್ಚು ಆಸಕ್ತಿಯನ್ನಿಟ್ಟುಕೊಂಡಿದ್ದಾರೆ. ಅಲ್ಲದೆ, ಏಕಾಂತದಲ್ಲಿ ಉಳಿಯುವುದನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ತಂದೆಯಾದವರು ತುಂಬಾ ಉದಾರತೆ ಹೊಂದಿದ್ದಾರೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಉಭಯ ಪಕ್ಷಗಾರರ ವಾದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಜರ್ಮನಿ ಶಾಲೆಯಲ್ಲಿ ಮಗುವಿಗೆ ತೊಂದರೆಯಾಗುತ್ತಿರುವ ಕುರಿತು ಮನಗಂಡಿದ್ದರು. ಅಲ್ಲದೆ, ಜರ್ಮನಿಯ ಶಾಲೆಯಲ್ಲಿ 29 ವಿದ್ಯಾರ್ಥಿಗಳಲ್ಲಿ ಕೇವಲ ಮೂವರು ಮಾತ್ರ ಭಾರತೀಯರು. ಅಲ್ಲಿನ ಶಿಕ್ಷಕರಿಗೆ ಇಂಗ್ಲಿಷ್ ಭಾಷೆ ಗೊತ್ತಿರಲಿಲ್ಲ. ಹೀಗಾಗಿ ಬಾಲಕ ಬ್ಯಾಂಕಾಕ್‌ನಲ್ಲಿದ್ದರೆ ಹೆಚ್ಚು ಸಂತೋಷವಾಗಿರುತ್ತಾನೆ ಎಂಬ ಅಭಿಪ್ರಾಯಕ್ಕೆ ನ್ಯಾಯಪೀಠ ಬಂದಿದೆ.
ಜೊತೆಗೆ, ಬಾಲಕ ಅತ್ಯಂತ ಚಾಣಾಕ್ಷವಾಗಿದೆ. ತನ್ನ ಆಯ್ಕೆಯನ್ನು ತಾನೇ ಮಾಡಿಕೊಳ್ಳುವಷ್ಟು ಬುದ್ದಿವಂತವಾಗಿದೆ ಎಂಬುದು ಗೊತ್ತಾಗಿದೆ. ಅಲ್ಲದೆ, ಪ್ರಾಪಂಚಿಕ ಪರಿಜ್ಞಾನವೂ ಉತ್ತಮವಾಗಿದೆ. ತಂದೆಯೊಂದಿಗೆ ಬ್ಯಾಂಕಾಕ್ನಲ್ಲಿ ನೆಲೆಸಲು ಯಾವುದೇ ತೊಂದರೆಯಿಲ್ಲ ಎಂಬುದಾಗಿ ವಿವರಿಸಿದ್ದು, ಅಲ್ಲಿಯೇ ನೆಲೆಸುವುದು ಉತ್ತಮ ಎಂಬುದಾಗಿ ಪೀಠ ತಿಳಿಸಿದೆ.