ಕರ್ನಾಟಕ

karnataka

By

Published : Apr 22, 2021, 6:42 AM IST

ETV Bharat / state

ಒಕ್ಕಲಿಗರ ಸಂಘದ ಚುನಾವಣೆ ಮುಂದೂಡಲು ಹೈಕೋರ್ಟ್ ಒಪ್ಪಿಗೆ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಮುಂದೂಡಲು ಹೈಕೋರ್ಟ್ ಒಪ್ಪಿಗೆ ನೀಡಿದೆ. ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಗೆ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು.

High Court agreed to postpone election of Okkaliga Association
ಒಕ್ಕಲಿಗರ ಸಂಘದ ಚುನಾವಣೆ ಮುಂದೂಡಲು ಕೋರ್ಟ್ ಅನುಮತಿ

ಬೆಂಗಳೂರು: ಕೋವಿಡ್ ಸೋಂಕು ಉಲ್ಬಣಿಸುತ್ತಿದ್ದು ರಾಜ್ಯ ಒಕ್ಕಲಿಗರ ಸಂಘಕ್ಕೆ ನಡೆಸಬೇಕಿದ್ದ ಚುನಾವಣೆ ಮುಂದೂಡಲು ಹೈಕೋರ್ಟ್​ ಒಪ್ಪಿಗೆ ಸೂಚಿಸಿದೆ.

ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಕೋರಿ ಚಿತ್ರ ನಿರ್ಮಾಪಕ ಕೃಷ್ಣೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಮಾ.5ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್​, ಮುಂದಿನ 3 ತಿಂಗಳೊಳಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿತ್ತು. ಈ ಮಧ್ಯೆ ರಾಜ್ಯದಲ್ಲಿ ಕೋವಿಡ್​ ಸೋಂಕು ವೇಗವಾಗಿ ಹಬ್ಬುತ್ತಿರುವ ಕಾರಣ ಚುನಾವಣೆ ಮುಂದೂಡುವುದು ಸೂಕ್ತ ಎಂದು ಚುನಾವಣಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ಬಳಿಕ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಸರ್ಕಾರ, ಚುನಾವಣೆಯನ್ನು 3 ತಿಂಗಳ ಅವಧಿಗೆ ಮುಂದೂಡಲು ಒಪ್ಪಿಗೆ ಕೋರಿತ್ತು.

ಬುಧವಾರ ಈ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಪಿ.ಎಸ್.ದಿನೇಶ್​ ಕುಮಾರ್​ ಅವರಿದ್ದ ಪೀಠ, ಚುನಾವಣೆ ಮುಂದೂಡಲು ಅನುಮತಿ ನೀಡಿತಲ್ಲದೆ, ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ ನಂತರ ಚುನಾವಣೆ ನಡೆಸಬೇಕು. ಒಂದು ವೇಳೆ ಕೋವಿಡ್​ ಹತೋಟಿಗೆ ಬಂದ ನಂತರವೂ ಸರ್ಕಾರ ಚುನಾವಣೆ ನಡೆಸದಿದ್ದರೆ, ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸಿ ವಿಚಾರಣೆಯನ್ನು ಜೂ.2ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಗೆ 2014ರ ಜ. 5ರಂದು ಚುನಾವಣೆ ನಡೆದಿತ್ತು. ಚುನಾಯಿತ ಮಂಡಳಿಯ 5 ವರ್ಷದ ಅವಧಿ ಪೂರ್ಣಗೊಳ್ಳುವ ಮೊದಲೇ ಅವ್ಯವಹಾರದ ಆರೋಪದಡಿ ಅವಿಶ್ವಾಸ ಮಂಡಿಸಿದ್ದರಿಂದ, ಸಂಘದ ಅಧ್ಯಕ್ಷ ಡಾ.ಅಪ್ಪಾಜಿ ಗೌಡ ಹಾಗೂ ಇತರ ಪದಾಧಿಕಾರಿಗಳು ತಮ್ಮ ಸ್ಥಾನ ಕಳೆದುಕೊಂಡಿದ್ದರು. ಅಪ್ಪಾಜಿಗೌಡರ ಬಳಿಕ ಅಧ್ಯಕ್ಷ ಗಾದಿಗೇರಿದ ಬೆಟ್ಟೇಗೌಡರನ್ನೂ ಪದಚ್ಯುತಿಗೊಳಿಸಿದ್ದರು. ಸಂಘ ವಾಷಿರ್ಕ ಲೆಕ್ಕ ಪರಿಶೋಧನಾ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ 2018ರ ಆಗಸ್ಟ್ 20ರಂದು ಸರ್ಕಾರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿ, ಬಳಿಕ 6 ತಿಂಗಳಿಗೊಮ್ಮೆ ಆಡಳಿತಾಧಿಕಾರಿ ಸೇವಾವಧಿಯನ್ನು ವಿಸ್ತರಿಸಿಕೊಂಡು ಬರುತ್ತಿತ್ತು. ಈ ನಿಯಮಬಾಹಿರ ಕ್ರಮವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು ಸಂಘಕ್ಕೆ ಚುನಾವಣೆ ನಡೆಸಲು ಕೋರಿದ್ದರು.

ಇದನ್ನೂಓದಿ: 24 ಗಂಟೆಯೊಳಗೆ ಕೋವಿಡ್‌ ಟೆಸ್ಟ್‌ ವರದಿ ಪ್ರಕಟಿಸಿ; ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​, ನಿಯಮಾನುಸಾರ 6 ತಿಂಗಳಿಗಿಂತ ಹೆಚ್ಚಿನ ಅವಧಿಗೆ ಆಡಳಿತಾಧಿಕಾರಿ ನೇಮಿಸುವಂತಿಲ್ಲ. ಆದರೆ, ಈ ಪ್ರಕರಣದಲ್ಲಿ ಎರಡೂವರೆ ವರ್ಷಗಳಿಂದ ಆಡಳಿತಾಧಿಕಾರಿಯ ಅವಧಿ ವಿಸ್ತರಿಸಿಕೊಂಡು ಬರುತ್ತಿರುವುದು ಸರಿಯಲ್ಲ. ಹೀಗಾಗಿ, ಸಂಘಕ್ಕೆ ಕೂಡಲೇ ಚುನಾವಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತ್ತಲ್ಲದೇ, ಮುಂದಿನ 3 ತಿಂಗಳ ಒಳಗೆ ಚುನಾವಣೆ ನಡೆಸಬೇಕೆಂದು ಮಾ.5ರಂದು ಸರ್ಕಾರಕ್ಕೆ ಆದೇಶಿಸಿತ್ತು.

ABOUT THE AUTHOR

...view details