ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ: ಎಲ್ಲೆಡೆ ರಾರಾಜಿಸುತ್ತಿರುವ ಬ್ಯಾನರ್, ಫ್ಲೆಕ್ಸ್

ನಗರದ ಸೌಂದರ್ಯ ಕೆಡಿಸುತ್ತಿರುವ ಫ್ಲೆಕ್ಸ್- ಬಂಟಿಂಗ್ಸ್​ಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸುವುದಕ್ಕೆ ನಿಷೇಧವಿದ್ದರೂ ಇದನ್ನು ಲೆಕ್ಕಿಸದೆ ಬೆಂಗಳೂರಿನ ಅಂದ ಹಾಳು ಮಾಡಿಕೊಂಡು ಬರಲಾಗುತ್ತಿದೆ.

ನಗರದಲ್ಲಿ ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ
ನಗರದಲ್ಲಿ ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ

By

Published : Jun 30, 2022, 8:39 PM IST

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬ್ಯಾನರ್‌ ಅಳವಡಿಕೆಯ ವಿರುದ್ಧ ಹೈಕೋರ್ಟ್ ದಿಟ್ಟ ಆದೇಶವಿದ್ದರೂ ನಗರದ ಎಲ್ಲೆಡೆ ಬ್ಯಾನರ್, ಪ್ಲೆಕ್ಸ್‌ಗಳ ಹಾವಳಿ ಮುಂದುವರೆದಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಗರಂ ಆಗಿದ್ದಾರೆ‌.

ಮುಖ್ಯವಾಗಿ ಆರ್.ಟಿ.ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಅಕ್ಕಪಕ್ಕದ ರಸ್ತೆಗಳಲ್ಲಿರುವ ಹತ್ತಾರು ವಿದ್ಯುತ್ ಕಂಬ, ಮರಗಳಿಗೆ ಬ್ಯಾನರ್​​ಗಳನ್ನು ಅಳವಡಿಸಲಾಗಿದೆ. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಪುತ್ರ ಜೀಶಾನ್ ಅಜೀಂ ಈ ಬ್ಯಾನರ್​​​ಗಳನ್ನು ಹಾಕಿರುವ ಆರೋಪಗಳಿದ್ದು, ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಬೈಕ್ ಸವಾರರ ಜೀವಕ್ಕೆ ಕಂಟಕ: ತೋರಣ ಮತ್ತು ಬ್ಯಾನರ್‌ಗಳಿಂದ ಬೈಕ್ ಸವಾರರ ಜೀವಕ್ಕೆ ಕಂಟಕ ಒದಗುತ್ತದೆ. ನಗರದ ಸೌಂದರ್ಯ ಕೆಡಿಸುತ್ತಿರುವ ಫ್ಲೆಕ್ಸ್- ಬಂಟಿಂಗ್ಸ್​ಗಳನ್ನು ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸುವುದಕ್ಕೆ ನಿಷೇಧವಿದ್ದರೂ ಜನಪ್ರತಿನಿಧಿಗಳು ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತಿರುವುದು ಮರುಕಳಿಸುತ್ತಲೇ ಇದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.


ರಾರಾಜಿಸುತ್ತಿರುವ ಜನಪ್ರತಿನಿಧಿಗಳ ಪ್ಲೆಕ್ಸ್​: ಸಣ್ಣಪುಟ್ಟ ವಿಚಾರಗಳಿಗೂ ಬೆಂಗಳೂರಿನ ಶಾಸಕರು, ಸಂಸದರು, ಮಾಜಿ ಕಾರ್ಪೊರೇಟರ್‌ಗಳು ತಮ್ಮ ಬೆಂಬಲಿಗರಿಂದ ಫ್ಲೆಕ್ಸ್ ಹಾಕಿಸಿಕೊಂಡು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಜಿದ್ದಿಗೆ ಬಿದ್ದವರಂತೆ ಬೆಂಗಳೂರಿನ ಬೀದಿಬೀದಿಗಳಲ್ಲಿ ತಮ್ಮ ಭಾವಚಿತ್ರವಿರುವ ದೊಡ್ಡ ದೊಡ್ಡ ಫಲಕಗಳನ್ನು ಹಾಕಿಸಿಕೊಂಡಿದ್ದು, ಬಿಬಿಎಂಪಿ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿಕೊಂಡು ಕುಳಿತಿದ್ದಾರೆ.

ತೋರಣಕ್ಕೆ ಬಳಸುವ ದಾರ ಅಪಾಯಕಾರಿ: ಆರ್.ಟಿ.ನಗರ, ಹೆಬ್ಬಾಳ, ವಿಜಯನಗರ ಮತ್ತು ಗೊಂವಿಂದರಾಜನಗರ ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ವಿವಿಧೆಡೆ ಬ್ಯಾನರ್, ಬಂಟಿಂಗ್ಸ್, ತೋರಣಗಳನ್ನು ಕಟ್ಟಿದ್ದಾರೆ. ಈ ತೋರಣಕ್ಕೆ ಬಳಸುವ ದಾರ ಅಪಾಯಕಾರಿಯಾಗಿದ್ದು, ಮಳೆ-ಗಾಳಿಗೆ ಕಿತ್ತುಕೊಂಡರೆ ಖಂಡಿತ ವಾಹನ ಸವಾರರು ಅಪಾಯಕ್ಕೆ ಸಿಲುಕುತ್ತಾರೆ.

ಕ್ರಿಮಿನಲ್ ಮೊಕದ್ದಮೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಅಪಾಯಕಾರಿ ತೋರಣಗಳನ್ನು ಅಳವಡಿಸುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಲಯ ಜಂಟಿ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರ ಜೊತೆ ಕಾರ್ಯಾಚರಣೆ ನಡೆಸಿ, ಮೊದಲ ಬಾರಿಗೆ ಬ್ಯಾನರ್ ಅಳವಡಿಸಿದವರಿಗೆ ಎಚ್ಚರಿಕೆ ನೀಡಬೇಕು. ಎಚ್ಚರಿಕೆ ನಂತರವೂ ಇದೇ ಪುನರಾವರ್ತನೆಯಾದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಇದನ್ನೂ ಓದಿ:ನಾಯಿ ಕಚ್ಚಿದ್ದಕ್ಕೆ ಚಿಕಿತ್ಸೆ ಪಡೆದ ವಿದ್ಯಾರ್ಥಿನಿ : ಮಹಾಮಾರಿ ರೇಬೀಸ್​ಗೆ ಬಲಿಯಾದ ಯುವತಿ

For All Latest Updates

TAGGED:

ABOUT THE AUTHOR

...view details