ಬೆಂಗಳೂರು: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಸೌಲಭ್ಯ ನೋಂದಣಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದ ಆರೋಗ್ಯ ಸಾಧನೆಗಳನ್ನು ಹಂಚಿಕೊಂಡಿರುವ ಸಚಿವರು, ಆರೋಗ್ಯ ಆರೈಕೆ ವೃತ್ತಿಪರರ ನೋಂದಣಿ (ಎಚ್.ಪಿ.ಆರ್) ವಲಯದಲ್ಲಿ 28,643 ವೈದ್ಯರು ಮತ್ತು ದಾದಿಯರು ನೋಂದಣಿಯಾಗಿದ್ದು, ರಾಜ್ಯ ಮೊದಲ ಸ್ಥಾನದಲ್ಲಿದೆ. ಆರೋಗ್ಯ ಸೌಲಭ್ಯ ನೋಂದಣಿಯಡಿ (ಎಚ್.ಎಫ್.ಆರ್) ಕರ್ನಾಟಕ 2 ನೇ ಸ್ಥಾನದಲ್ಲಿದ್ದು, 27,244 ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ಸ್ಕ್ಯಾನ್ ಮತ್ತು ಶೇರ್ ವೈಶಿಷ್ಟ್ಯ ಬಳಸಿಕೊಂಡು ಹೊರರೋಗಿ ವಿಭಾಗಗಳಲ್ಲಿ ಬ್ಲಾಕ್‌ನಲ್ಲಿ ಫಾಸ್ಟ್ ಟ್ರ್ಯಾಕ್ ಕೌಂಟರ್‌ಗಳನ್ನು ಹೊಂದಿಸುವ ವಲಯದಲ್ಲೂ ರಾಜ್ಯ ಗಮನಾರ್ಹ ಸಾಧನೆ ಮಾಡಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ದೇಶದ ಸಮಗ್ರ ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಇದು ಡಿಜಿಟಲ್ ಮಾರ್ಗಗಳ ಮೂಲಕ ಆರೋಗ್ಯ ಪರಿಸರ ವ್ಯವಸ್ಥೆಯ ವಿವಿಧ ಪಾಲುದಾರರ ನಡುವೆ ಇರುವ ಅಂತರ ತಗ್ಗಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
4.58 ಲಕ್ಷ ದಾಖಲೆಗಳ ಲಿಂಕ್: ದೇಶದಲ್ಲಿ 1.35 ಕೋಟಿ ಜನರು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಹೊಂದಿದ್ದು, ಈ ವಲಯದಲ್ಲಿ ರಾಜ್ಯ 7 ನೇ ಸ್ಥಾನದಲ್ಲಿದೆ. ಎಬಿಡಿಎಂ ಬಿಲ್ಡಿಂಗ್ ಬ್ಲಾಕ್ಸ್ ಸಹ ರೂಪಿಸಲಾಗಿದ್ದು, ರಾಜ್ಯದ ಪ್ರಗತಿಯನ್ನು ನಿರ್ಧರಿಸುವ ಪ್ರಮುಖ ಆರೋಗ್ಯ ದಾಖಲೆಗಳನ್ನು ಇದರಡಿ ಸಂಯೋಜಿಸಲಾಗಿದೆ.
ಆಯುಷ್ಮಾನ್ ಕಾರ್ಡ್ ಹೊಂದಿರುವ ವ್ಯಕ್ತಿ ಇ - ಆಸ್ಪತ್ರೆ ಪೋರ್ಟಲ್ ಮೂಲಕ ಆರೋಗ್ಯ ದಾಖಲೆಯ ಸಂಪರ್ಕ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಲಾಗಿದೆ. ಎಬಿಎಚ್ಎಗೆ 4.58 ಲಕ್ಷ ದಾಖಲೆಗಳನ್ನು ಲಿಂಕ್ ಮಾಡುವ ಮೂಲಕ ದೇಶದಲ್ಲಿ ಕರ್ನಾಟಕ 2 ನೇ ಸ್ಥಾನದಲ್ಲಿದೆ.