ಬೆಂಗಳೂರು :ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಹೇಳಿಕೆಗಳನ್ನು ಮಾಜಿ ಸಚಿವ ಡಾ. ಹೆಚ್ ಸಿ ಮಹಾದೇವಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಕುಮಾರಸ್ವಾಮಿಯವರ ಹೇಳಿಕೆಗಳು ಜಾತ್ಯಾತೀತ ಜನತಾದಳ ಎಂಬ ಪಕ್ಷದ ಹೆಸರಿಗೇ ಕಳಂಕ ಎಂದು ಅವರು ಕಿಡಿಕಾರಿದ್ದಾರೆ.
ಮಾಜಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಟ್ವೀಟ್ ಮಾಜಿ ಸಚಿವ ಡಾ. ಹೆಚ್ ಸಿ ಮಹಾದೇವಪ್ಪ ಟ್ವೀಟ್ ಫ್ರೀ ಪ್ಲ್ಯಾನ್ ಮಾಡಿಕೊಂಡು ಸಿದ್ದರಾಮಯ್ಯ ಹಾಗೂ ತಂಡ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ನನ್ನ ಹೆಸರು ಹಾಳು ಮಾಡಿದರು ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಅವರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಜಾತ್ಯಾತೀತ ಜನತಾದಳ ಎಂಬ ಹೆಸರಿಟ್ಟುಕೊಂಡು ದೇವೇಗೌಡರ ಸೆಕ್ಯುಲರ್ ವ್ಯಾಮೋಹದಿಂದ ಕಾಂಗ್ರೆಸ್ ಸೇರಿ ಕೆಟ್ಟೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತು ಜಾತ್ಯಾತೀತ ಜನತಾದಳ ಎಂಬ ಪಕ್ಷದ ಹೆಸರಿಗೇ ಕಳಂಕ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಸಮಾನಾಂತರ ಎದುರಾಳಿಯನ್ನಾಗಿ ಪರಿಗಣಿಸಿ ಹೋರಾಟ ನಡೆಸುತ್ತೇವೆ ಎಂದು ಒಂದು ಕಾಲದಲ್ಲಿ ಗಟ್ಟಿಯಾಗಿ ಹೇಳುತ್ತಿದ್ದ ಜೆಡಿಎಸ್ ಪಕ್ಷ ಕೊನೆ ಕೊನೆಗೆ ತಮ್ಮ ಸಿದ್ಧಾಂತವನ್ನು ಮರೆತು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಜೊತೆಗೆ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದ್ದಾರೆ.
ಪಕ್ಷದ ಸಿದ್ಧಾಂತಕ್ಕಿಂತ ಅಧಿಕಾರ ಮುಖ್ಯವೆನ್ನುವ ಹೆಚ್ ಡಿ ಕುಮಾರಸ್ವಾಮಿಯಂತವರು ತಾವೊಬ್ಬ ಸೆಕ್ಯುಲರ್ ಎನ್ನುವುದಕ್ಕೂ ಕಮ್ಯುನಲ್ ಎನ್ನುವುದಕ್ಕೂ ಅಂತಹ ದೊಡ್ಡ ವ್ಯತ್ಯಾಸ ಏನಿಲ್ಲ. ಇವರಿಗೆ ಅಧಿಕಾರವೇ ಅಂತಿಮ ಗುರಿಯಾಗಿದೆ. ಇದಕ್ಕಾಗಿ ಏನನ್ನಾದ್ರೂ ಮಾತನಾಡುತ್ತಾರೆ. ಇವರನ್ನು ಗಂಭೀರವಾಗಿ ತೆಗೆದುಕೊಂಡರೆ ಭ್ರಮ ನಿರಸನವಾಗುತ್ತದೆ ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.