ಬೆಂಗಳೂರು : ಪಕ್ಷ ಸಂಘಟನೆಗಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ನನ್ನಿಂದ ಆರ್ಥಿಕ ಸಹಾಯ ಪಡೆದುಕೊಂಡಿದ್ದಾರೆಯೇ ಹೊರತು ವೈಯಕ್ತಿಕವಾಗಿ ಅಲ್ಲ ಎಂದು ಜೆಡಿಎಸ್ ಮುಖಂಡ ಹಾಗು ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಸ್ಪಷ್ಟಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಪರಿಷತ್ ಟಿಕೆಟ್ಗಾಗಿ ಶರವಣ ಅವರಿಂದ ಹೆಚ್ ಡಿ ಕುಮಾರಸ್ವಾಮಿ ಹಣ ಪಡೆದುಕೊಂಡಿದ್ದಾರೆ ಎಂಬ ಸಿಎಂ ಇಬ್ರಾಹಿಂ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತ, ಸಿಎಂ ಇಬ್ರಾಹಿಂ ಅವರು ಕೂಡಾ ಅವರ ಪುತ್ರನ ಚುನಾವಣಾ ಪ್ರಚಾರಕ್ಕೆ ಆರ್ಥಿಕ ಸಹಾಯವನ್ನು ಪಡೆದುಕೊಂಡಿದ್ದಾರೆ. ಪಕ್ಷಕ್ಕೆ ನನ್ನ ಕೊಡುಗೆ ಇದೆ. ಪಕ್ಷ ಕಷ್ಟದಲ್ಲಿ ಇದ್ದಾಗ ನಾನು ಸಹಾಯ ಮಾಡಿದ್ದೇನೆ. ಪಕ್ಷ ಸಂಘಟನೆಗಾಗಿ ನನ್ನಂತವರಿಂದ ಕುಮಾರಸ್ವಾಮಿ ಆರ್ಥಿಕ ಸಹಾಯ ಪಡೆದುಕೊಂಡಿದ್ದಾರೆ. ಮನೆ ಕಟ್ಟಲು ಹಣ ಪಡೆದುಕೊಂಡಿಲ್ಲ. ಚುನಾವಣಾ ಸಂದರ್ಭದಲ್ಲಿ ಪಕ್ಷ ಕಟ್ಟಲು ಸಹಾಯ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ನಾನು ಅವರ ರೀತಿಯಲ್ಲಿ ಬೇರೆ ಬೇರೆ ಪಕ್ಷದಿಂದ ಬಂದವನಲ್ಲ. ಕಳೆದ 25 ವರ್ಷದಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಜೊತೆಗೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಕೊಟ್ಟಿಲ್ಲ ಅಂತ ನಮ್ಮ ಪಕ್ಷಕ್ಕೆ ನೀವು ಬಂದಿದ್ದೀರಿ. ಪಕ್ಷದ ಅಧ್ಯಕ್ಷರಾಗಿದ್ದಾಗ ನಿಮ್ಮ ಗಮನಕ್ಕೆ ತಂದು ಎಲ್ಲಾ ಕೆಲಸವನ್ನು ಮಾಡುತ್ತಿದ್ದರು. ನನ್ನ ಬ್ಲಡ್ ಜೆಡಿಎಸ್. ಅಧಿಕಾರ ಇಲ್ಲ ಅಂತ ನಾನು ಬೇರೆ ಪಕ್ಷಕ್ಕೆ ಹೋಗಿಲ್ಲ. ನಿಮ್ಮ ಬಾಯಿಂದ ಈ ರೀತಿಯ ಮಾತು ಬರುವುದು ಸರಿಯಲ್ಲ. ನಿಮ್ಮ ಪುತ್ರ ಹುಮನಾಬಾದ್ ನಿಂದ ಚುನಾವಣೆಗೆ ನಿಲ್ಲಿಸಲು ನನ್ನ ಬಳಿ ಹಣ ಕೇಳಿದ್ರಲ್ವಾ..? ನಾನು ಹಣ ಕೊಟ್ಟಿದ್ದೆ, ಅದನ್ನು ಎಲ್ಲಾದರೂ ಹೇಳಿದ್ದೇನಾ? ಎಂದು ಸಿ.ಎಂ ಇಬ್ರಾಹಿಂಗೆ ಶರವಣ ಪ್ರಶ್ನಿಸಿದರು.