ಬೆಂಗಳೂರು: ಆಪರೇಷನ್ ಕಮಲದ ಸುಳಿಗೆ ಸಿಲುಕಿದ ಕಾಂಗ್ರೆಸ್ ಶಾಸಕರ ರಕ್ಷಣೆಗೆ ದೋಸ್ತಿ ನಾಯಕರ ಕಸರತ್ತು ಮುಂದುವರೆದಿದೆ. ಕುಮಾರಕೃಪಾ ಅತಿಥಿ ಗೃಹದಲ್ಲಿ ದೋಸ್ತಿ ಪಕ್ಷದ ನಾಯಕರು ಸಭೆ ನಡೆಸಿದ್ದು, ಇನ್ನೂ ಸಂಪರ್ಕಕ್ಕೆ ಸಿಗದ ಶಾಸಕರ ಸಂಪರ್ಕಕ್ಕೆ ಯತ್ನ ಮುಂದುವರೆಸಿದ್ದಾರೆ.
ನಗರದ ಕರಮಾರ ಕೃಪಾ ಅತಿಥಿ ಗೃಹಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜೊತೆ ಸಿಎಂ ಚರ್ಚೆ ನಡೆಸಿದರು. ಈ ಚರ್ಚೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು.
ಸಭೆಯಲ್ಲಿ ಬಿಜೆಪಿಯ ಆಪರೇಷನ್ ಕಮಲದ ಸುಳಿಗೆ ಸಿಲುಕಿರುವ ಕಾಂಗ್ರೆಸ್ ಶಾಸಕರ ರಕ್ಷಣೆ, ಕೆಲ ಬಂಡಾಯ ಶಾಸಕರನ್ನು ಸಮಾಧಾನ ಪಡಿಸುವುದು, ಆ ಶಾಸಕರನ್ನು ಬಿಜೆಪಿಯಿಂದ ದೂರು ಇರಿಸುವುದು, ಅಗತ್ಯ ಬಿದ್ದರೆ ಆ ಶಾಸಕರನ್ನು ರೆಸಾರ್ಟ್ಗೆ ಶಿಫ್ಟ್ ಮಾಡುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಯಿತು. ಈ ವೇಳೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದಂತೆ ಸಿಎಂಗೆ ವೇಣುಗೋಪಾಲ್ ಅಭಯ ನೀಡಿದರು. ನಮ್ಮ ಶಾಸಕರು ನಮ್ಮ ಜೊತೆಯಲ್ಲಿಯೇ ಇರಲಿದ್ದಾರೆ ಎಂದು ಭರವಸೆ ನೀಡಿದರು ಎಂದು ತಿಳಿದು ಬಂದಿದೆ.
ಕೆ.ಸಿ.ವೇಣುಗೋಪಾಲ್ ಭೇಟಿ ಬಳಿಕ ಮಾತನಾಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬೆಂಗಳೂರಿಗೆ ಕೆ.ಸಿ.ವೇಣುಗೋಪಾಲ್ ಬಂದಿದ್ದಾರೆ, ಅದಕ್ಕಾಗಿ ಬಂದೆ. ಇದೊಂದು ಸೌಹಾರ್ದಯುತ ಭೇಟಿ ಅಷ್ಟೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನನ್ನ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ ಎಂದರು.