ಬೆಂಗಳೂರು :ಮುಸ್ಲಿಂ ಬಾಂಧವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಬಕ್ರೀದ್ ಹಬ್ಬದ ಶುಭಾಶಯ ಕೋರಿದ್ದಾರೆ. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವು ಸೌಹಾರ್ದತೆ ಮೂಡಿಸಲಿ ಎಂದಿದ್ದಾರೆ.
ಈ ಕುರಿತ ಟ್ವೀಟ್ ಮಾಡಿರುವ ಅವರು, ತ್ಯಾಗ ಬಲಿದಾನದ ಜೊತೆಗೆ ವಿಶ್ವ ಭ್ರಾತೃತ್ವವನ್ನು ಸಾರುವ ಪವಿತ್ರ ಹಬ್ಬವು ನಾಡಿನಲ್ಲಿ ಸ್ನೇಹ-ಸೌಹಾರ್ದತೆ ಬೆಳೆಸಲು ಪ್ರೇರಣೆ ನೀಡಲಿ ಎಂದು ಶುಭ ಕೋರಿದ್ದಾರೆ.
ಮುಸ್ಲಿಂ ಬಾಂಧವರಿಗೆ ಪ್ರೀತಿ, ಭ್ರಾತೃತ್ವ ಹಾಗೂ ಮಾನವೀಯ ಸೇವೆಯ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು. ಈ ಹಬ್ಬ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಹೆಚ್ಚಿಸಲಿ ಎಂದು ಹಾರೈಸುತ್ತೇನೆ ಹಾಗೂ ವಿಪತ್ತಿನ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಬಕ್ರೀದ್ ಹಬ್ಬವನ್ನು ಆಚರಿಸಬೇಕೆಂದು ದೇವೇಗೌಡರು ವಿನಂತಿಸಿದ್ದಾರೆ.
ಇನ್ನು, ಕೊರೊನಾ ಸವಾಲಿನ ನಡುವೆ ಬದುಕುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲರೂ ಕೂಡ ಜವಾಬ್ದಾರಿಯಿಂದ ವರ್ತಿಸೋಣ. ಬಕ್ರೀದ್ ಹಬ್ಬ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ತರಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.