ಕರ್ನಾಟಕ

karnataka

ETV Bharat / state

ಪದೇಪದೆ ಗಡಿ, ಭಾಷೆ ವಿವಾದ ಕೆಣಕುತ್ತಿರುವ ಶಿವಸೇನೆ ವಿರುದ್ಧ ಹೆಚ್​ಡಿಕೆ ಕಿಡಿ - kumaraswamy tweet against shivsene

ಬೆಳಗಾವಿಯಲ್ಲಿ ಅಕ್ರಮವಾಗಿ ವಿಧಾನಸೌಧ ನಿರ್ಮಿಸಿ 2ನೇ ರಾಜಧಾನಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ವಾದಿಸಿದೆ. ಬೆಳಗಾವಿ ವಿಚಾರದಲ್ಲಿನ ಮಹಾರಾಷ್ಟ್ರ ಖ್ಯಾತೆ ಗಮನಿಸಿಯೇ ನನ್ನ ಅವಧಿಯಲ್ಲಿ ಅದನ್ನು ನಿರ್ಮಿಸಲಾಯಿತು, ಕಲಾಪವನ್ನೂ ನಡೆಸಲಾಯಿತು. ಸುವರ್ಣ ಸೌಧವು ಮಹಾರಾಷ್ಟ್ರ ವಿಸ್ತರಣಾವಾದದ ವಿರುದ್ಧದ ಕನ್ನಡಿಗರ ಸಾರ್ವಭೌಮತ್ವದ ಸಂಕೇತ..

hd kumaraswamy
ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ

By

Published : Mar 14, 2021, 4:48 PM IST

ಬೆಂಗಳೂರು: ಪದೇಪದೆ ಗಡಿ, ಭಾಷೆ ವಿವಾದ ಕೆಣಕುತ್ತಿರುವ ಶಿವಸೇನೆ ನಡೆಯ ವಿರುದ್ಧ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್​​ ‌ಮಾಡಿರುವ ಅವರು, ಬೆಳಗಾವಿಯಲ್ಲಿ ಕಳೆದೆಂಟು ದಿನಗಳಿಂದ ಮರಾಠಿಗರ ಮೇಲೆ ಹಲ್ಲೆ ನಡೆಯುತ್ತಿರುವುದಾಗಿಯೂ, ಅಲ್ಲಿಗೆ ಸರ್ವಪಕ್ಷಗಳ ನಿಯೋಗ ತೆರಳಬೇಕಾಗಿಯೂ ಶಿವಸೇನೆಯ ನಾಯಕರೊಬ್ಬರು ಹೇಳಿದ್ದಾರೆ.

ಪದೇಪದೆ ಗಡಿ, ಭಾಷೆ ವಿವಾದ ಕೆಣಕುತ್ತಿರುವ ಶಿವಸೇನೆ ನಡೆ ಖಂಡನೀಯ. ಸರ್ಕಾರದ ವಿರುದ್ಧ ಜನರಿಗೆ ಇರುವ ಅಸಮಾಧಾನ ಮರೆಮಾಚಲು ಶಿವಸೇನೆ ಈ ಕೆಣಕುವ ಕೆಲಸ ಮಾಡುತ್ತಿದೆ‌ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರು ಕನ್ನಡ ಧ್ವಜ ಸ್ಥಾಪಿಸಿರುವುದನ್ನು ಶಿವಸೇನೆ ಅಪರಾಧವೆಂಬಂತೆ ನೋಡುತ್ತಿದೆ. ಅಲ್ಲಿಂದಾಚೆಗೆ ಮಹಾರಾಷ್ಟ್ರ ಪ್ರೇರಿತ ಭಾಷೆ, ಗಡಿ ವಿವಾದ ಮುನ್ನೆಲೆಗೆ ಬಂದಿದೆ. ಅಸಲಿಗೆ ಬೆಳಗಾವಿ ನಮ್ಮದು.

ಇಲ್ಲಿ ಕನ್ನಡ ಧ್ವಜ ಹಾರಿಸುವುದು ನಮ್ಮ ಹಕ್ಕು. ಇದನ್ನು ಪ್ರಶ್ನಿಸಲು ಮಹಾರಾಷ್ಟ್ರಕ್ಕೆ ಯಾವ ಹಕ್ಕೂ ಇಲ್ಲ. ಕಳೆದೆಂಟು ದಿನಗಳಿಂದ ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಹಲ್ಲೆ ನಡೆದಿದೆ ಎಂದು ಮಹಾರಾಷ್ಟ್ರ ಹೇಳಿದೆ.

ಕೊಲ್ಲಾಪುರದಲ್ಲಿ ಮೊದಲಿಗೆ ನಮ್ಮ ಬಸ್​ಗಳ ಮೇಲೆ ದಾಳಿ ನಡೆಸಿದವರು ಯಾರು? ಬೆಳಗಾವಿಯಲ್ಲಿ ಮರಾಠಿ ಭಾಷೆ ಫಲಕ ತೆರವು ವೇಳೆ ದಾಳಿ ನಡೆದಿದ್ದು ಕನ್ನಡಿಗರ ಮೇಲೆ. ಇಷ್ಟಾಗಿಯೂ ಮಹಾರಾಷ್ಟ್ರ ಅತ್ತೂ ಕರೆದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದೆ‌ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಅಕ್ರಮವಾಗಿ ವಿಧಾನಸೌಧ ನಿರ್ಮಿಸಿ 2ನೇ ರಾಜಧಾನಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ವಾದಿಸಿದೆ. ಬೆಳಗಾವಿ ವಿಚಾರದಲ್ಲಿನ ಮಹಾರಾಷ್ಟ್ರ ಖ್ಯಾತೆ ಗಮನಿಸಿಯೇ ನನ್ನ ಅವಧಿಯಲ್ಲಿ ಅದನ್ನು ನಿರ್ಮಿಸಲಾಯಿತು, ಕಲಾಪವನ್ನೂ ನಡೆಸಲಾಯಿತು. ಸುವರ್ಣ ಸೌಧವು ಮಹಾರಾಷ್ಟ್ರ ವಿಸ್ತರಣಾವಾದದ ವಿರುದ್ಧದ ಕನ್ನಡಿಗರ ಸಾರ್ವಭೌಮತ್ವದ ಸಂಕೇತ.

ಗಡಿ ವಿಚಾರದಲ್ಲಿ ಮಹಾಜನ ಆಯೋಗದ ವರದಿಯೇ ಅಂತಿಮ. ಮಹಾರಾಷ್ಟ್ರದ ಹಠದಿಂದಲೇ ರಚಿಸಲಾದ ಮಹಾಜನ ಆಯೋಗವು, ಬೆಳಗಾವಿ ಕರ್ನಾಟಕದ್ದು ಎಂದು ಸ್ಪಷ್ಟವಾಗಿ ಹೇಳಿದೆ. ಈ ವಿಚಾರವಾಗಿ‌ ಮಹಾರಾಷ್ಟ್ರ ಮತ್ತೊಮ್ಮೆ ನಡೆಸುತ್ತಿರುವ ಕಾನೂನು ಹೋರಾಟ ವ್ಯರ್ಥವಾಗಲಿದೆ. ಅಲ್ಲಿವರೆಗೆ ವಿಸ್ತರಾಣಾವಾದದ ಮಾತುಗಳನ್ನು ನೆರೆಯ ರಾಜ್ಯ ನಿಲ್ಲಿಸುವುದು ಒಳಿತು ಎಂದು ಕಿವಿ ಮಾತು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ಶಿವಸೇನೆ ಪುಂಡಾಟ: ಎರಡನೇ ದಿನವೂ ಕರ್ನಾಟಕ-ಮಹಾರಾಷ್ಟ್ರ ಬಸ್‌ ಸಂಚಾರ ಸ್ಥಗಿತ​

ಗಡಿ ವಿವಾದದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಬಯಸಿದ್ದಾರೆ. ಈ ವಿವಾದದಲ್ಲಿ ಯಾರ ಮಧ್ಯಸ್ಥಿತಿಕೆಯೂ ಬೇಡ. ಪ್ರಧಾನಿ ಮಧ್ಯಸ್ಥಿಕೆ ಮಾಡಿದರೆ ಮಹಾರಾಷ್ಟ್ರ ಬಿಜೆಪಿಯು ಅವರ ಮೇಲೆ ಪ್ರಭಾವ ಬೀರದೇ ಇರದೇ? ಮಧ್ಯಸ್ಥಿಕೆಯಲ್ಲಿ ಮೋದಿಯವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ವಹಿಸಿದರೆ ಬಿಜೆಪಿಗರು ಒಪ್ಪುವರೇ?‌ ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details