ಬೆಂಗಳೂರು : ರಾಜ್ಯಸಭಾ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಸ್ಪರ್ಧೆ ಮಾಡಬೇಕು ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರ ಮಾಡಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಕೆ. ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಧ್ಯಾಹ್ನ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ದೇವೇಗೌಡರು ರಾಷ್ಟ್ರದ ಹಿರಿಯ ರಾಜಕಾರಣಿ. ರಾಜ್ಯ ಹಾಗೂ ದೇಶದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವು ಅವರಿಗಿದೆ. ಹಾಗಾಗಿ ಅವರು ಸಂಸತ್ತಿನಲ್ಲಿ ಇರಬೇಕು. ಹೀಗಾಗಿ ಎಲ್ಲ ಶಾಸಕರು ದೇವೇಗೌಡರ ಸ್ಪರ್ಧೆಗೆ ತೀರ್ಮಾನ ಮಾಡಿದ್ದೇವೆ. ಅವರನ್ನು ಸ್ಪರ್ಧಿಸುವಂತೆ ಒಪ್ಪಿಸುತ್ತೇವೆ ಎಂದು ಹೇಳಿದರು.