ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಗೆ ಸಮನಾಂತರವಾಗಿ ನಿಯೋಜಿತ ಅಭ್ಯರ್ಥಿಗಳು ಪಾದಯಾತ್ರೆ ಹಾಗೂ ಗ್ರಾಮ ವಾಸ್ತವ್ಯ ಮಾಡುವಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪತ್ರದ ಮೂಲಕ ಸೂಚಿಸಿದ್ದಾರೆ. ಪಕ್ಷದ ವತಿಯಿಂದ ಗುರುತಿಸಿರುವ 123 ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳು ಪಂಚರತ್ನ ಯೋಜನೆಯನ್ನು ಆಯಾ ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡಬೇಕು. ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೊಂದಿಗೆ ರ್ಯಾಲಿ, ಜನಸಂಪರ್ಕಸಭೆ, ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಎರಡು ದಿನ ಗ್ರಾಮಗಳ ಪಾದಯಾತ್ರೆ ಮತ್ತು ಎರಡು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಬೇಕು. ಆ ಸಂದರ್ಭದಲ್ಲಿ ಪಕ್ಷದ ಇದುವರೆಗಿನ ಸಾಧನೆ ತಿಳಿಸಿ, ಪಕ್ಷ ಅಧಿಕಾರಕ್ಕೆ ಬಂದರೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಮನವರಿಕೆ ಮಾಡಬಹುದು. ಅಲ್ಲದೆ, ಆಯಾ ಕ್ಷೇತ್ರದ ಜನರ ಕುಂದು-ಕೊರತೆಗಳನ್ನು ಆಲಿಸಬಹುದು. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಇದರ ಜೊತೆಗೆ ಚುನಾವಣೆಯಲ್ಲಿ ಜನರ ನಾಡಿ ಮಿಡಿತ ಏನೆಂಬುದನ್ನು ಅರಿಯಲು ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳಿಗೆ ಪತ್ರ ರವಾನೆ: ಈ ಸಂಬಂಧದ ಪತ್ರವನ್ನು ಜೆಡಿಎಸ್ ಅಭ್ಯರ್ಥಿಗಳಿಗೆ ಈಗಾಗಲೇ ರವಾನಿಸಲಾಗಿದೆ. ಪಾದಯಾತ್ರೆ ಮಾಡುವುದರಿಂದ ಪಕ್ಷ ಸಂಘಟನೆಗೂ ಸಹಕಾರಿಯಾಗಲಿದೆ. ಪಕ್ಷದ ರಾಜ್ಯಾಧ್ಯಕ್ಷರು, ಯುವ ಘಟಕದ ಅಧ್ಯಕ್ಷರು ಹಾಗೂ ಸಂಸದರು ಜಿಲ್ಲಾವಾರು ಪ್ರವಾಸ ಕೈಗೊಳ್ಳಲಿದ್ದು, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ವೇ ಸಾಧಾರಣ 30 ರಿಂದ 50 ಗ್ರಾಮ ಪಂಚಾಯಿತಿಗಳಿದ್ದು, ಒಂದು ಗ್ರಾಮ ಪಂಚಾಯತ್ನಲ್ಲಿ ಪಕ್ಷದ ನಿಯೋಜಿತ ಅಭ್ಯರ್ಥಿಗಳು ಎರಡು ದಿನ ಗ್ರಾಮ ಪಾದಯಾತ್ರೆ ಮತ್ತು ಎರಡು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯಗಳನ್ನು ಕೈಗೊಂಡರೆ, 2 ರಿಂದ 3 ತಿಂಗಳ ಕಾಲಮಿತಿಯೊಳಗೆ ಪೂರ್ಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಬಹುದು.