ಬೆಂಗಳೂರು: ಬಾಲ್ಯವಿವಾಹ ಕಾಯಿದೆಯಡಿ ತನಿಖೆಗೆ ಗುರಿಯಾಗಿದ್ದ ವ್ಯಕ್ತಿಯೇ(ಪತಿ) ಸಂತ್ರಸ್ಥೆಯ(ಪತ್ನಿ) ಮತ್ತು ಆಕೆಯ ಮಗುವಿನ ಜೀವನಾಧಾರವಾಗಿರುವ ಅಂಶವನ್ನು ಪರಿಗಣಿಸಿರುವ ಹೈಕೋರ್ಟ್, ಆರೋಪಿ ವಿರುದ್ಧದ ತನಿಖೆಯನ್ನು ರದ್ದುಪಡಿಸಿ ಆದೇಶಿಸಿದೆ. ಬಾಲ್ಯವಿವಾಹ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ರದ್ದುಗೊಳಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸಂತ್ರಸ್ತೆಯ ಆಧಾರ್ ಕಾರ್ಡ್ ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ಸಂತ್ರಸ್ತೆಯನ್ನು ವಿವಾಹವಾದ ಸಂದರ್ಭದಲ್ಲಿ 17 ವರ್ಷ 8 ತಿಂಗಳಾಗಿತ್ತು. ಪ್ರಸ್ತುತ 22 ವರ್ಷ ವಯಸ್ಸಾಗಿದೆ. ಜತೆಗೆ, ಅರ್ಜಿದಾರರನ್ನೇ ಆಕೆ ಮತ್ತು ಆಕೆಯ ಮಗು ಜೀವನಾಧಾರವನ್ನಾಗಿಸಿಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಸಂತ್ರಸ್ತೆ(ಪತ್ನಿ)ಯ ಪ್ರಮಾಣಪತ್ರ ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರನ್ನು ಶಿಕ್ಷೆಗೆ ಗುರಿಪಡಿಸಿದಲ್ಲಿ ಸಂತ್ರಸ್ತೆ ಮತ್ತು ಆಕೆಯ ಮಗುವನ್ನು ಸಂಕಷ್ಟಕ್ಕೆ ದೂಡಿದಂತಾಗಲಿದೆ. ಇದು ಕಾನೂನಿನ ದುರ್ಬಳಕೆಯಾಗಲಿದೆ. ಆದ ಕಾರಣ ಅರ್ಜಿದಾರರ ವಿರುದ್ಧದ ವಿಚಾರಣೆ ರದ್ದುಪಡಿಸುತ್ತಿರುವುದಾಗಿ ಪೀಠ ತಿಳಿಸಿದೆ.
ವಿಚಾರಣೆ ವೇಳೆ ಹಾಜರಾಗಿದ್ದ ಪತ್ನಿ, ಪ್ರಕರಣದ ಆರೋಪಿಯೇ ತಮ್ಮ ಕುಟುಂಬಕ್ಕೆ ಜೀವನಾಧಾರವಾಗಿದ್ದಾರೆ. ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಮುಂದುವರೆಸಿದಲ್ಲಿ ಬಂಧನಕ್ಕೊಳಬೇಕಾಗುತ್ತದೆ. ಕಾನೂನುನ್ನು ಜಾರಿ ಮಾಡುವುದಕ್ಕಿಂತ ಹೆಚ್ಚಾಗಿ ಪತ್ನಿ ಮತ್ತು ಮಗು ದುಃಖಕ್ಕೆ ತುತ್ತಾಗಬೇಕಾಗುತ್ತದೆ ಎಂದು ಮನವಿ ಮಾಡಿದರು. ಸಂತ್ರಸ್ತೆ ಆರೋಪಿಯ ಅಕ್ಕನ ಮಗಳಾಗಿದ್ದು, ಸಂಪೂರ್ಣವಾಗಿ ಗೊತ್ತಿರುವವರಾಗಿದ್ದು, ಅಪ್ರಾಪ್ತೆಯನ್ನು ವಿವಾಹವಾಗಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.