ಬೆಂಗಳೂರು :ಕಾವೇರಿ ಕೂಗು ಅಭಿಯಾನಕ್ಕೆ ಸಂಬಂಧಿಸಿದ ಕಾರ್ಯಕ್ರಮ ಪ್ರಸಾರ ಮಾಡಿದರೆ ನ್ಯಾಯಾಂಗ ನಿಂದನೆ ಆಗಲಿದೆ ಎಂದು ಖಾಸಗಿ ಸುದ್ದಿ ವಾಹಿನಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದ ವಕೀಲರು ಖುದ್ದು ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿದೆ.
ಕಾವೇರಿ ಕೂಗು ಅಭಿಯಾನದ ಅಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಈಶ ಫೌಂಡೇಶನ್ ಕ್ರಮಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರ ವಕೀಲರು ಗೈರು ಹಾಜರಾಗಿದ್ದರು. ಬದಲಿಗೆೆ ಕಿರಿಯ ವಕೀಲ ಪೀಠಕ್ಕೆ ಮಾಹಿತಿ ನೀಡಿ, ತಮ್ಮ ಸೀನಿಯರ್ ಕ್ವಾರಂಟೈನ್ಗೆ ಒಳಗಾಗಿದ್ದು, ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಜತೆಗೆ ಆರೋಗ್ಯ ಸಮಸ್ಯೆ ಇರುವುದರಿಂದ ಅರ್ಜಿಯನ್ನು ಹೈಕೋರ್ಟ್ ಸ್ವಯಂ ಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿದಾರ ವಕೀಲರು ಪ್ರಕರಣದ ವಿಚಾರಣೆಗೆ ಸಾಕಷ್ಟು ಬಾರಿ ಗೈರಾಗಿದ್ದಾರೆ. ಎಷ್ಟು ದಿನದಿಂದ ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ಪ್ರಶ್ನಿಸಿತು. ಅಲ್ಲದೇ, ಲೀಗಲ್ ನೋಟಿಸ್ ಜಾರಿ ಮಾಡಿರುವ ಕುರಿತು ವಿವರಣೆ ನೀಡಲು ಮುಂದಿನ ವಿಚಾರಣೆ ವೇಳೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿತು.