ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿರ್ಮಿಸುವ ಎಲ್ಲ ಬಡಾವಣೆಗಳ ಸಂಪೂರ್ಣ ಮಾಹಿತಿಯನ್ನು ಹಂತ ಹಂತವಾಗಿ ತನ್ನ ವೆಬ್ಸೈಟ್ನಲ್ಲಿ ದಾಖಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಡಿಎ ನಿರ್ಮಿಸುವ ಬಡಾವಣೆಗಳನ್ನು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಸೂಚನೆ ನೀಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬಿಡಿಎ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರಿದ್ದ ದ್ವಿಸದಸ್ಯ ಪೀಠ, ಎಲ್ಲ ದಾಖಲೆಗಳ ವಿವರವನ್ನು ವೆಬ್ಸೈಟ್ನಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದಿದೆ. ಅಲ್ಲದೆ, ಈ ಪ್ರಕರಣವನ್ನು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳುವಂತೆ ಹೈಕೋರ್ಟ್ನ ರಿಜಿಸ್ಟ್ರಾರ್ ಅವರಿಗೆ ನ್ಯಾಯಪೀಠ ಇದೇ ವೇಳೆ ಸೂಚನೆ ನೀಡಿದೆ.
ಯಾವ ಅಂಶ ದಾಖಲಿಸಬೇಕು?:ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸಿದ ಭೂಮಿಯ ಒಟ್ಟು ವಿಸ್ತೀರ್ಣ(ಗ್ರಾಮಗಳ ನಕ್ಷೆ, ಗೂಗಲ್ ಮ್ಯಾಪ್, ಆರ್ಎಂಪಿ), ಡಿನೋಟಿಫೈಡ್ ಜಮೀನು, ಅಭಿವೃದ್ಧಿಗಾಗಿ ಎಂಜಿನಿಯರ್ ವಿಭಾಗಕ್ಕೆ ಹಸ್ತಾಂತರಿಸಿರುವ ಜಮೀನು, ನಿವೇಶನಗಳ ಸಂಖ್ಯೆ ಮತ್ತು ಅವುಗಳ ರಚನೆ, ಒಟ್ಟು ನಿವೇಶನಗಳು, ಮೂಲೆ ನಿವೇಶನಗಳು, ಭೂಮಾಲೀಕರಿಗೆ ನೀಡಿರುವ ಪರಿಹಾರ, ಈ ಸಂಬಂಧ ದಾಖಲಾಗಿರುವ ಪ್ರಕರಣಗಳು, ಹರಾಜು ಮಾಡಿರುವ ವಿವರವನ್ನು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ.