ಬೆಂಗಳೂರು: ಅಧ್ಯಯನ ಮಾಡುತ್ತಿರುವ ಶಿಕ್ಷಣ ಸಂಸ್ಥೆಯ ಕೆಲ ನಿಯಮಗಳ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ 9ನೇ ತರಗತಿಯ ವಿದ್ಯಾರ್ಥಿನಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದ ನಗರದ ಮಲ್ಲೇಶ್ವರದ ಬ್ರಿಗೇಡ್ ಶಾಲೆಗೆ ಹೈಕೋರ್ಟ್ 1 ಲಕ್ಷ ರೂ.ಗಳ ವೆಚ್ಚ ವಿಧಿಸಿದೆ.
ಈ ಸಂಬಂಧ ಮಗುವಿನ ಪೋಷಕರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವೆಚ್ಚ ವಿಧಿಸಿದೆ. ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ವೆಚ್ಚದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸಬೇಕು ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, 9 ಮತ್ತು 10ನೇ ತರಗತಿಗಳು ಶಿಕ್ಷಣದ ಪ್ರಮುಖ ಘಟ್ಟಗಳಾಗಿವೆ ಎಂಬುದಾಗಿ ತಿಳಿದಿರುವ ಪೋಷಕರು ಯಾವುದೇ ತರಗತಿಯನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತಿರುತ್ತಾರೆ.
ಆದರೆ, ಶಾಲಾ ಆಡಳಿತ ಮಂಡಳಿಯ ನಡುವಳಿಕೆ ದುರದೃಷ್ಟಕರ. ಇದರಿಂದಾಗಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೆ ಒಳಗಾಗಿರುತ್ತಾರೆ. ಈ ನಷ್ಟವನ್ನು ಹಣದ ಮೂಲಕ ಅಳೆಯಲು ಸಾಧ್ಯವಿಲ್ಲ. ಆದರೆ, ಅಂತಹ ವರ್ತನೆ ತೋರಿದವರನ್ನು ಹಗುರವಾಗಿ ನೋಡುವುದು ಸರಿಯಲ್ಲ. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಬೇಕು ಎಂದು ಪೀಠ ಅಭಿಪ್ರಾಯ ಪಟ್ಟಿತು.
ಅಲ್ಲದೆ, ಪ್ರತಿವಾದಿ ಶಾಲೆ ಅರ್ಜಿದಾರರ ಮಗು ಹಾಗೂ ಇತರೆ ಮಕ್ಕಳ ಪೋಷಕರಿಂದ ಮುಚ್ಚಳಿಕೆ ಸಲ್ಲಿಸದ ಕಾರಣ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಿದ್ದಾರೆ. ಹೀಗಿರುವಾಗ ಅರ್ಜಿದಾರರ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡು ನ್ಯಾಯಾಂಗ ನಿಂದನೆ ಅರ್ಜಿಯನ್ನು ಇತ್ಯರ್ಥ ಪಡಿಸಿದಲ್ಲಿ ನ್ಯಾಯ ಒದಗಿಸಿದಂತಾಗುವುದಿಲ್ಲ.
ಜತೆಗೆ ಭವಿಷ್ಯದಲ್ಲಿ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ, ಇತರೆ ಯಾವುದೇ ಶಿಕ್ಷಣ ಸಂಸ್ಥೆಯು ಮಕ್ಕಳ ಭವಿಷ್ಯದೊಂದಿಗೆ ಆಟವಾಡುವುದಕ್ಕೆ ಮುಂದಾಗಬಾರದು, ಜತೆಗೆ ಮಕ್ಕಳು ಮತ್ತು ಪೋಷಕರಿಗೆ ಆತಂಕವನ್ನುಂಟು ಮಾಡಬಾರದು ಎಂದು ತಿಳಿಸಿ 1 ಲಕ್ಷ ರೂ.ಗಳ ವೆಚ್ಚ ವಿಧಿಸಿ ಆದೇಶಿಸಿದೆ. ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ವೆಚ್ಚದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡಬೇಕು ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥ ಪಡಿಸಿತು.