ಕರ್ನಾಟಕ

karnataka

By

Published : Aug 4, 2020, 10:22 PM IST

ETV Bharat / state

ಕೋವಿಡ್ ನಿರ್ವಹಣೆ ತಜ್ಞರ ಸಮಿತಿಗೆ ಎಸ್‍ಒಪಿ ರೂಪಿಸಿಲು ಹೈಕೋರ್ಟ್ ನಿರ್ದೇಶನ..

ಸಂದರ್ಭಕ್ಕೆ ತಕ್ಕಂತೆ ಸಂಬಂಧಪಟ್ಟ ಆಸ್ಪತ್ರೆಗಳು ಮತ್ತು ಸರ್ಕಾರಕ್ಕೆ ಅಗತ್ಯ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಬೇಕಾಗುತ್ತದೆ. ಸುಪ್ರೀಂಕೋರ್ಟ್ ಪ್ರಕಾರ ತಜ್ಞರ ಸಮಿತಿಯ ಪರಿಕಲ್ಪನೆ ಬಹಳ ವಿಶಾಲವಾಗಿದೆ. ಅದಕ್ಕಾಗಿಯೇ ಬೇರೆ ಕ್ಷೇತ್ರಗಳ ತಜ್ಞರನ್ನೂ ಸಮಿತಿಯಲ್ಲಿ ಸೇರಿಸಬೇಕು ಎಂದು ಹೇಳಲಾಗಿದೆ..

High Court
ಹೈಕೋರ್ಟ್

ಬೆಂಗಳೂರು :ಕೊರೊನಾ ನಿರ್ವಹಣೆಯಲ್ಲಿ ಅಗತ್ಯ ಮಾರ್ಗದರ್ಶನ ನೀಡಲು ಮತ್ತು ಮೇಲ್ವಿಚಾರಣೆ ನಡೆಸಲು ರಚಿಸಿರುವ ರಾಜ್ಯಮಟ್ಟದ ತಜ್ಞರ ಸಮಿತಿಯ ಕಾರ್ಯವ್ಯಾಪ್ತಿ ಮತ್ತು ಕಾರ್ಯವೈಖರಿಯ ಬಗ್ಗೆ ಸ್ಪಷ್ಟ ಎಸ್‍ಒಪಿ ರೂಪಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೊರೊನಾ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಹಾಗೂ ನ್ಯಾ. ಅರವಿಂದ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು, ರಾಜ್ಯ ಮಟ್ಟದ ತಜ್ಞರ ಸಮಿತಿಯಲ್ಲಿ ಸ್ವಯಂ ಸೇವಾ ಸಂಸ್ಥೆಯನ್ನು ಸೇರಿಸಿರುವ ಸರ್ಕಾರದ ಪರಿಷ್ಕೃತ ಆದೇಶದ ಪ್ರತಿಯನ್ನು ಪೀಠಕ್ಕೆ ಸಲ್ಲಿಸಿದರು.

ಬಳಿಕ ವಿವರಿಸಿ, ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ಸಮಿತಿ ರಚಿಸಲಾಗಿದೆ. ಸಮಿತಿ ಈಗಾಗಲೇ ಕಾರ್ಯಾರಂಭ ಮಾಡಿದೆ ಎಂದು ತಿಳಿಸಿದರು. ಆದೇಶದ ಪ್ರತಿ ಪರಿಶೀಲಿಸಿದ ಪೀಠ, ರಾಜ್ಯ ಮಟ್ಟದ ತಜ್ಞರ ಸಮಿತಿ ಕೇವಲ ಆಸ್ಪತ್ರೆಗಳಿಗೆ ಭೇಟಿ, ಪರಿಶೀಲನೆ ಅಥವಾ ಸಭೆ ನಡೆಸುವುದಕ್ಕಷ್ಟೇ ಸೀಮಿತವಲ್ಲ. ಬೆಡ್‍ಗಳ ಲಭ್ಯತೆ, ಆ್ಯಂಬ್ಯುಲೆನ್ಸ್ ವ್ಯವಸ್ಥೆ, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟ, ಅಲ್ಲಿನ ಶುಚಿತ್ವ, ವೈದ್ಯಕೀಯ ಉಪಕರಣಗಳು, ಔಷಧಿ ಹಾಗೂ ಇತರ ಮೂಲ ಸೌಕರ್ಯಗಳ ಬಗ್ಗೆ ಮೇಲ್ವಿಚಾರಣೆ ನಡೆಸಬೇಕಾಗುತ್ತದೆ.

ಸಂದರ್ಭಕ್ಕೆ ತಕ್ಕಂತೆ ಸಂಬಂಧಪಟ್ಟ ಆಸ್ಪತ್ರೆಗಳು ಮತ್ತು ಸರ್ಕಾರಕ್ಕೆ ಅಗತ್ಯ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಬೇಕಾಗುತ್ತದೆ. ಸುಪ್ರೀಂಕೋರ್ಟ್ ಪ್ರಕಾರ ತಜ್ಞರ ಸಮಿತಿಯ ಪರಿಕಲ್ಪನೆ ಬಹಳ ವಿಶಾಲವಾಗಿದೆ. ಅದಕ್ಕಾಗಿಯೇ ಬೇರೆ ಕ್ಷೇತ್ರಗಳ ತಜ್ಞರನ್ನೂ ಸಮಿತಿಯಲ್ಲಿ ಸೇರಿಸಬೇಕು ಎಂದು ಹೇಳಲಾಗಿದೆ.

ಸ್ವಯಂಸೇವಾ ಸಂಸ್ಥೆಗಳು ಎಲ್ಲಾ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸಮಿತಿಯ ಕಾರ್ಯವ್ಯಾಪ್ತಿ ಹಾಗೂ ಕಾರ್ಯವೈಖರಿಯ ಬಗ್ಗೆ ಸ್ಪಷ್ಟ ಎಸ್‍ಒಪಿ ಇರಬೇಕು. ಈ ಸಮಿತಿಯು ಜಿಲ್ಲಾ ಮಟ್ಟದ ಸಮಿತಿಗಳು ಹಾಗೂ ಬಿಬಿಎಂಪಿ ಸಮಿತಿಯನ್ನು ಹೇಗೆ ಮೇಲ್ವಿಚಾರಣೆ ನಡೆಸಲಿದೆ ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ತಜ್ಞರ ಸಮಿತಿಯ ಸದಸ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ಮುಂದಿನ ಹತ್ತು ದಿನಗಳಲ್ಲಿ ಉತ್ತರಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details