ಬೆಂಗಳೂರು:ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲು ನಿಗದಿಪಡಿಸಿ ರಾಜ್ಯ ಸರ್ಕಾರ ಅಕ್ಟೋಬರ್ 8ರಂದು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಎಸ್ಟಿ ವರ್ಗಕ್ಕೆ ಮೀಸಲು ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಎಚ್.ವಿ. ಚಂದ್ರೇಗೌಡ ಸೇರಿ ನಗರಸಭೆಯ 21 ಮಂದಿ ಚುನಾಯಿತ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಚುನಾವಣಾ ಆಯೋಗದ ಪರ ವಕೀಲ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಹಾಗೂ ಹಿರಿಯ ವಕೀಲ ಎ. ಎಸ್. ಪೊನ್ನಣ್ಣ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿ ರಚಿಸಿರುವ ಹೈಕೋರ್ಟ್, ಮೀಸಲಾತಿ ಸಂಬಂಧ ಅ.22 ರೊಳಗೆ ಕರಡು ವರದಿ ಸಲ್ಲಿಸುವಂತೆ ಸಮಿತಿಗೆ ನಿರ್ದೇಶಿಸಿದೆ. ಹಾಗೆಯೇ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್ ವಾದಿಸಿ, ಹಾಸನ ನಗರಸಭೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿತ್ತು. ಆದರೆ ಅ.8ರಂದು ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಎಸ್ಟಿ ವರ್ಗಕ್ಕೆ ಮೀಸಲಿಡಲಾಗಿದೆ. ಆದರೆ ನಗರಸಭೆ ವ್ಯಾಪ್ತಿಯಲ್ಲಿ ಎಸ್ಟಿ ಜನಸಂಖ್ಯೆ ಹೆಚ್ಚಿಗೆ ಇಲ್ಲ. ನಗರಸಭೆಯ 35 ಸ್ಥಾನಗಳ ಪೈಕಿ ಕೇವಲ ಒಂದು ವಾರ್ಡ್ ಮಾತ್ರ ಎಸ್ಟಿ ವರ್ಗಕ್ಕೆ ಮೀಸಲಾಗಿದೆ. ಅಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಾರೆ. 17 ಸ್ಥಾನಗಳನ್ನು ಗೆದ್ದಿರುವ ಜೆಡಿಎಸ್ ಅನ್ನು ಅಧಿಕಾರದಿಂದ ದೂರವಿಡಲು ರಾಜಕೀಯ ದುರುದ್ದೇಶದಿಂದ ಎಸ್ಟಿ ಮೀಸಲಾತಿ ನಿಗದಿಪಡಿಸಲಾಗಿದೆ. ಕಾನೂನಿಗೆ ವಿರುದ್ಧವಾದ ಈ ಮೀಸಲಾತಿಯನ್ನು ರದ್ದುಪಡಿಸಿ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ-ಮಹಿಳೆ ಅಥವಾ ಸಾಮಾನ್ಯ ವರ್ಗಕ್ಕೆ ಮರು ಹಂಚಿಕೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಪರ ವಾದಿಸಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಕಾನೂನಿನ ಪ್ರಕಾರ, ಸಾಮಾಜಿಕ ನ್ಯಾಯದ ತತ್ವಗಳನ್ನು ಆಧರಿಸಿ ಮತ್ತು ಮಾರ್ಗಸೂಚಿಗಳನ್ನು ಪಾಲಿಸಿಯೇ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಮೀಸಲಾತಿ ವಿಚಾರದಲ್ಲಿ ಎಲ್ಲಾ ಹಂತಗಳಲ್ಲೂ ಎಲ್ಲರನ್ನೂ ಸಮಾಧಾನಪಡಿಸುವುದು ಕಷ್ಟ. ಮೀಸಲಾತಿಯನ್ನು ಒಂದಲ್ಲ, ಒಂದು ರೀತಿ ಪ್ರಶ್ನೆ ಮಾಡುತ್ತಲೇ ಬರಲಾಗುತ್ತಿದೆ. ಇದರ ಪರಿಣಾಮ ಕಳೆದ ಎರಡು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತವೇ ಇಲ್ಲದಂತಾಗಿದೆ. ತಡೆ ನೀಡಿದರೆ, ಮತ್ತಷ್ಟು ವಿಳಂಬವಾಗುತ್ತದೆ. ಆದ್ದರಿಂದ ಹೊಸ ಅಧಿಸೂಚನೆಯಂತೆ ಮುಂದುವರಿಯಲು ಸರ್ಕಾರಕ್ಕೆ ಅನುಮತಿ ನೀಡಬೇಕು ಎಂದರು.