ಬೆಂಗಳೂರು: ಅಸ್ಪೃಶ್ಯತೆ ತೊಡೆದು ಹಾಕಬೇಕೆಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ನಾನಾ ಯೋಜನೆಯನ್ನು ಜಾರಿಗೆ ತಂದಿವೆ. 21ನೇ ಶತಮಾನದಲ್ಲೂ ಅಸ್ಪೃಶ್ಯತೆ ಆಚರಣೆಯಲ್ಲಿದ್ದು, ಆಗಾಗ ಬೆಳಕಿಗೆ ಬರುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಸವರ್ಣೀಯರ ತಂಡವೊಂದು ದಲಿತರ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದವರು ಬೆಂಗಳೂರಿನ ಹೊಸಕೋಟೆ ತಾಲೂಕಿನ ಹುಣಸೆ ಹಳ್ಳಿಯ ದಲಿತರಾದ ಮುನಿಯಪ್ಪ(75), ರಾಮಕೃಷ್ಣ (37) ಹಾಗೂ ಮಂಜುಳ (26) ಎಂಬುವರ ಮೇಲೆ ಸವರ್ಣೀಯರ ತಂಡವೊಂದು ಕ್ಷುಲ್ಲಕ ಕಾರಣಕ್ಕೆ ಮಚ್ಚು, ದೊಣ್ಣೆಗಳಿಂದ ಹಲ್ಲೆ ನಡೆಸಿ ಜಾತಿ ಪದ ಬಳಸಿ ಅವಮಾನಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಇನ್ನು ಕಳೆದ 2 ತಿಂಗಳ ಹಿಂದೆಯೇ ಸಣ್ಣಪುಟ್ಟ ವಿಷಯಕ್ಕೆ ಗ್ರಾಮದ ಮೇಲ್ಜಾತಿಯ ಜನರು ದಲಿತರ ಕಾಲೋನಿಗೆ ನುಗ್ಗಿ ಗಲಾಟೆ ನಡೆಸಿ ದಾಳಿ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಇದೀಗ ಕ್ಷುಲ್ಲಕ ಕಾರಣಕ್ಕೆ ಮೂವರ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಮೊನ್ನೆ ಮಹಿಳೆಯೊಬ್ಬರ ಮನೆಯ ಮುಂದೆ ಚರಂಡಿ ಕಟ್ಟಿಕೊಂಡಿದ್ದು, ಅದರಲ್ಲಿದ್ದ ಕೆಸರನ್ನು ತೆಗೆದು ಸ್ವಚ್ಛ ಮಾಡುವಾಗ ಸವರ್ಣೀಯರ ಮನೆಗಳಿಗೆ ತಗುಲಿದೆ ಎಂದು ಕಾರಣ ಹೇಳಿಕೊಂಡು ಬಂದ ಗುಂಪು ಮೊದಲು ರಾಮಕೃಷ್ಣ ಎಂಬುವರ ಮೇಲೆ ಹಲ್ಲೆ ನಡೆಸಿದೆ. ಅದನ್ನು ಬಿಡಿಸಲು ಹೋದ ಮಹಿಳೆಯ ಮೇಲೆಯೂ ಹಲ್ಲೆ ನಡೆಸಿ, ಆಕೆಯ ಮಾಂಗಲ್ಯವನ್ನು ಕಿತ್ತೆಸೆದಿದ್ದಾರೆ. ಇನ್ನು ಗಲಾಟೆ ಬಿಡಿಸಲು ಬಂದ ವೃದ್ಧ ಮುನಿಯಪ್ಪನಿಗೂ ಹಿಗ್ಗಾಮುಗ್ಗಾ ಥಳಿಸಿರುವ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.