ಬೆಂಗಳೂರು: ಸರ್ಕಾರ ಮಂಜೂರು ಮಾಡಲು ಉದ್ದೇಶಿಸಿದ್ದ ಜಮೀನನ್ನು ಅಕ್ರಮವಾಗಿ ಹಿಂಪಡೆದ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ನೂತನ ಸಚಿವ ಮುರುಗೇಶ್ ನಿರಾಣಿ ರಾಜೀನಾಮೆ ನೀಡಬೇಕು ಎಂದು ಉದ್ಯಮಿ ಆಲಂ ಪಾಷಾ ಒತ್ತಾಯಿಸಿದ್ದಾರೆ.
ನೂತನ ಸಚಿವ ನಿರಾಣಿ ಕಿರುಕುಳ ನೀಡುತ್ತಿದ್ದಾರೆ: ಉದ್ಯಮಿ ಆಲಂ ಪಾಷಾ - Businessman Alam Pasha
ಮುರುಗೇಶ್ ನಿರಾಣಿ ಹಲವು ರೀತಿಯಲ್ಲಿ ಕಿರುಕುಳ ನೀಡಿದ್ದಾರೆ. ಇದೀಗ ಅವರು ಸಚಿರಾಗಿರುವುದರಿಂದ ನನ್ನ ಮೇಲೆ ಯಾವುದೇ ರೀತಿಯ ಕ್ರಮ ಜರುಗಿಸಬಹುದು. ಈಗಾಗಲೇ ಹಲವು ಬಾರಿ ಕಿರುಕುಳ ನೀಡಿರುವ ಅವರು ತೊಂದರೆ ನೀಡುವ ಸಾಧ್ಯತೆ ಇದೆ ಎಂದು ಉದ್ಯಮಿ ಆಲಂ ಪಾಷಾ ಆರೋಪಿಸಿದ್ದಾರೆ.
ಜಮೀನು ಹಿಂಪಡೆದ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿಎಸ್ವೈ ಹಾಗೂ ನಿರಾಣಿ ವಿರುದ್ಧದ ವಿಚಾರಣೆಯನ್ನು ಮುಂದುವರೆಸಲು ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ. ಇಂತಹ ಸಂದರ್ಭದಲ್ಲಿ ಪ್ರಮುಖ ಆರೋಪಿಯಾಗಿರುವ ನಿರಾಣಿಗೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ. ನ್ಯಾಯಸಮ್ಮತ ಹಾಗೂ ಮುಕ್ತ ವಿಚಾರಣೆ ನಡೆಯಲು ನಿರಾಣಿ ಹಾಗೂ ಬಿಎಸ್ವೈ ರಾಜೀನಾಮೆ ನೀಡಬೇಕು.
ತಮ್ಮ ಸಂಸ್ಥೆಗೆ 2010-11 ನೇ ಸಾಲಿನಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ ಮೀಟ್ನಲ್ಲಿ ದೇವನಹಳ್ಳಿ ಬಳಿ 26 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. 600 ಕೋಟಿ ವೆಚ್ಚದ ಕಾಮಗಾರಿ ಆರಂಭಿಸಲು ಸಿದ್ದರಿದ್ದೆವು. ಈ ವೇಳೆ ನಿರಾಣಿ ತಮ್ಮನ್ನು ಖಾಸಗಿಯಾಗಿ ಭೇಟಿಯಾಗಲು ಹೇಳಿದಾಗ ನಾನು ನಿರಾಕರಿಸಿದ್ದೆ. ಇದರಿಂದ ಮಂಜೂರು ಮಾಡಲು ಉದ್ದೇಶಿಸಿದ್ದ ಜಮೀನನ್ನು ಅಕ್ರಮವಾಗಿ ಹಿಂಪಡೆದರು ಎಂದು ಆರೋಪಿಸಿದ್ದಾರೆ.