ಬೆಂಗಳೂರು: ಮಾಜಿ ಸಚಿವ, ಹಾನಗಲ್ ಶಾಸಕ ಸಿ.ಎಂ.ಉದಾಸಿ(85) ನಿಧನರಾಗಿದ್ದಾರೆ. ರಕ್ತಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಹಲವು ದಿನಗಳ ಹಿಂದೆ ನಗರದ ಕಿರಣ್ ಮಜುಂದಾರ್ ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ನಾಳೆ ಆಸ್ಪತ್ರೆಯವರು ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ನೀಡುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಹಾನಗಲ್ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಎರಡಕ್ಕೂ ಹೆಚ್ಚು ಬಾರಿ ಸಚಿವರಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಜನತಾ ಪರಿವಾರದಿಂದ ರಾಜಕೀಯಕ್ಕೆ ಬಂದ ಅವರು, ಬಳಿಕ ಬಿಜೆಪಿಗೆ ಬಂದಿದ್ದರು. ಆ ನಂತರ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಜತೆ ಕೆಜೆಪಿಗೆ ಹೋಗಿ ಹಾನಗಲ್ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. 2018 ರಲ್ಲಿ ಬಿಜೆಪಿಯಿಂದ ಅದೇ ಕ್ಷೇತ್ರದಿಂದ ಗೆಲುವು ಸಾಧಿಸಿ ಶಾಸಕರಾಗಿದ್ದರು.
ಕಳೆದ ವಾರ ಅವರ ಆರೋಗ್ಯ ಹದೆಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.