ಬೆಂಗಳೂರು: ವಿಧಾನ ಪರಿಷತ್ಗೆ ನಾಮ ನಿರ್ದೇಶನಗೊಂಡು ಸಚಿವ ಸ್ಥಾನ ದಕ್ಕಿಸಿಕೊಳ್ಳುವ ಪ್ರಯತ್ನಕ್ಕೆ ನ್ಯಾಯಾಲಯ ತಡೆ ಒಡ್ಡಿದ ಹಿನ್ನೆಲೆಯಲ್ಲಿ ವಿಧಾನಸಭೆಯಿಂದ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಎಂಎಲ್ಸಿ ಹೆಚ್. ವಿಶ್ವನಾಥ್ ಬೇಡಿಕೆ ಮುಂದಿಟ್ಟಿದ್ದಾರೆ.
ಜೆಡಿಎಸ್ನ ಧರ್ಮೇಗೌಡರ ನಿಧನದಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಉಪ ಚುನಾವಣೆಗೆ ಹೆಚ್.ವಿಶ್ವನಾಥ್ ಸ್ಪರ್ಧೆ ನಡೆಸಲು ಬಯಸಿದ್ದು, ಟಿಕೆಟ್ ಕೊಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೂಲಕ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ತರಲು ಮುಂದಾಗಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇರುವ ಹಿನ್ನೆಲೆಯಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಅನಾಯಾಸವಾಗಿ ಬಿಜೆಪಿ ಗೆಲ್ಲಲಿದೆ. ಹಾಗಾಗಿ ಆ ಸ್ಥಾನದ ಮೇಲೆ ಹೆಚ್.ವಿಶ್ವನಾಥ್ ಕಣ್ಣಿಟ್ಟಿದ್ದಾರೆ.
ಸಚಿವ ಸ್ಥಾನದ ಭಾಗ್ಯ ಸಿಕ್ಕಿಲ್ಲ:
ಸದ್ಯ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ. ಶಾಸಕ ಸ್ಥಾನದಿಂದ ಅನರ್ಹತೆ ಹೊಂದಿದ ಸದಸ್ಯರು ಮತ್ತೆ ಚುನಾಯಿತರಾಗಿಯೇ ಸಚಿವ ಸ್ಥಾನ ಪಡೆಯಬೇಕು. ನಾಮ ನಿರ್ದೇಶನಗೊಂಡರೆ ಸಚಿವ ಸ್ಥಾನ ನೀಡಬಾರದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ತಮ್ಮೊಂದಿಗೆ ಬಿಜೆಪಿಗೆ ಬಂದವರೆಲ್ಲ ಸಚಿವ ಸ್ಥಾನ ಪಡೆದರೂ ವಿಶ್ವನಾಥ್ಗೆ ಇನ್ನೂ ಸಚಿವ ಸ್ಥಾನದ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ನಾಮನಿರ್ದೇಶನ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಯತ್ನಿಸುತ್ತಿದ್ದಾರೆ.
ಸಿಎಂ ಬಳಿ ಬೇಡಿಕೆ :
ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗಲು ತಮ್ಮ ಪಾತ್ರವನ್ನು ಮರೆಯಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿಳಿಸಿರುವ ವಿಶ್ವನಾಥ್, ಕೊಟ್ಟ ಮಾತನ್ನು ಉಳಿಸಿಕೊಳ್ಳಿ ನನ್ನನ್ನು ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಚುನಾಯಿಸಿ ಸಚಿವ ಸ್ಥಾನ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ಮಿತ್ರ ಮಂಡಳಿ ಬೆಂಬಲ:
ಈಗಾಗಲೇ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿ ಟಿಕೆಟ್ಗಾಗಿ ಬೇಡಿಕೆ ಇಟ್ಟಿರುವ ವಿಶ್ವನಾಥ್, ಇದೀಗ ಬಾಂಬೆ ಟೀಂ, ಮಿತ್ರ ಮಂಡಳಿ ಎಂದು ಕರೆಸಿಕೊಳ್ಳುವ ತಮ್ಮ ತಂಡದ ಸದಸ್ಯರ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಸಚಿವರಾಗಿರುವವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ನಾಮಪತ್ರ ಸಲ್ಲಿಕೆಗೆ ಮಾ.04 ಕಡೆಯ ದಿನವಾಗಿದೆ. ಈ ಹಿಂದೆ ನಡೆದ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸ್ಥಾನಗಳಿಗೆ ಅಚ್ಚರಿಯ ಆಯ್ಕೆ ಮಾಡಿದ್ದ ಬಿಜೆಪಿ ಹೈಕಮಾಂಡ್ ಈ ಬಾರಿಯೂ ಅದೇ ತಂತ್ರ ಅನುಸರಿಸಲಿದೆ ಎನ್ನಲಾಗುತ್ತಿದೆ. ಹಾಗಾಗಿ ವಿಶ್ವನಾಥ್, ಸಿಎಂ ಯಡಿಯೂರಪ್ಪ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿಸಿ ಟಿಕೆಟ್ ಪಡೆಯುವ ಸರ್ಕಸ್ ನಡೆಸುತ್ತಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ವಿಶ್ವನಾಥ್ ನಂತರ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತಗೊಂಡಿದ್ದರು. ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿ ಸಚಿವ ಸ್ಥಾನ ನೀಡುತ್ತೇವೆ. ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಡಿ ಎಂದು ಬಿಜೆಪಿ ನಾಯಕರು ಹೇಳಿದರೂ ಕೇಳದೇ ಉಪಕದನದ ಅಖಾಡಕ್ಕಿಳಿದು ಸೋತಿದ್ದರು. ನಂತರ ವಿಧಾನ ಸಭೆಯಿಂದ ಪರಿಷತ್ಗೆ ನಡೆದ ಚುನಾವಣೆಯ ಟಿಕೆಟ್ ಕೇಳಿದ್ದರು. ಆದರೆ ಪಕ್ಷ ನಿರಾಕರಿಸಿತ್ತು. ಅದಾದ ನಂತರ ಪರಿಷತ್ಗೆ ನಾಮನಿರ್ದೇಶನ ಮಾಡುವಾಗಿ ವಿಶ್ವನಾಥ್ ಹೆಸರನ್ನು ಪರಿಗಣಿಸಿ ಅವಕಾಶ ಕಲ್ಪಿಸಲಾಯಿತು. ಆದರೆ ಕೋರ್ಟ್ ತೀರ್ಪು ಅವರ ಸಚಿವ ಸ್ಥಾನದ ಆಸೆಗೆ ತಣ್ಣೀರೆರಚಿತ್ತು. ಹಾಗಾಗಿ ಈಗ ಸಚಿವ ಸ್ಥಾನ ಪಡೆಯಲು ಇರುವ ಕಡೆಯ ಆಯ್ಕೆ ಎನ್ನುವಂತೆ ವಿಧಾನಸಭೆಯಿಂದ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಉಪ ಚುನಾವಣೆ ಟಿಕೆಟ್ಗೆ ದುಂಬಾಲು ಬಿದ್ದಿದ್ದಾರೆ.
ಓದಿ: ಮೀಸಲಾತಿ ಬಗ್ಗೆ ಸರ್ಕಾರ ದಿಢೀರ್ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ: ಸಂಸದ ಸಂಗಣ್ಣ ಕರಡಿ
ಒಂದು ವೇಳೆ ಯಡಿಯೂರಪ್ಪ ಮಧ್ಯಪ್ರವೇಶ ಮಾಡಿ ವಿಶ್ವನಾಥ್ ಪರ ಹೈಕಮಾಂಡ್ ಮಟ್ಟದಲ್ಲಿ ಬ್ಯಾಟಿಂಗ್ ಮಾಡಿದರೆ ಉಪಚುನಾವಣಾ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ ಬಜೆಟ್ ಸಿದ್ಧತೆಯಲ್ಲಿರುವ ಯಡಿಯೂರಪ್ಪ ಯಾವ ಹೆಜ್ಜೆ ಇಡಲಿದ್ದಾರೆ ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ.
ಕಾರ್ಯಕರ್ತರ ಪರ ಪಕ್ಷದ ಒಲವು:
ಇನ್ನು ಪರಿಷತ್ ಉಪ ಚುನಾವಣೆಗೆ ಸಾಮಾನ್ಯ ಕಾರ್ಯಕರ್ತರನ್ನು ಪರಿಗಣಿಸಬೇಕು ಎಂದು ಬಿಜೆಪಿ ನಾಯಕರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ರಾಜ್ಯಸಭೆ ಮತ್ತು ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆ ವೇಳೆ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಿದಂತೆ ಈ ಬಾರಿಯೂ ನೀಡಬೇಕು ಎನ್ನುವ ಒಲವು ತೋರಿದ್ದಾರೆ. ಆದರೆ, ಅಂತಿಮವಾಗಿ ಹೈಕಮಾಂಡ್ ಯಾವ ನಿಲುವು ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.