ಬೆಂಗಳೂರು:ಮುಂಬರುವಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಒಲವು ತೋರಿದ್ದಾರೆ. ಪ್ರೆಸ್ ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ''ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸುತ್ತಿದ್ದೇನೆ. ನಾನು ಟೆಕ್ನಿಕಲಿ ಬಿಜೆಪಿ, ಮೆಂಟಲಿ ಕಾಂಗ್ರೆಸ್ಸಿಗ. ಹಾಗಾಗಿ ಮಾನಸಿಕ ನಿರ್ಧಾರದ ಜೊತೆ ಹೋಗಲು ನಿರ್ಧರಿಸಿದ್ದೇನೆ. ಕಾಂಗ್ರೆಸ್ನಿಂದಲೇ ಟಿಕೆಟ್ ಬಯಸಿದ್ದೇನೆ. ಕೊಟ್ಟರೆ ಸ್ಪರ್ಧಿಸುವೆ. ಇಲ್ಲದಿದ್ರೆ ಪಕ್ಷಕ್ಕಾಗಿ ಕೆಲಸ ಮಾಡುವೆ. ನನಗೂ ಪಾರ್ಲಿಮೆಂಟ್ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇದೆ. ಬೇರೆ ಬೇರೆ ಇಲಾಖೆಗಳಲ್ಲಿ ಮಂತ್ರಿ ಸ್ಥಾನ ನಿಭಾಯಿಸಿದ್ದೇನೆ. ನಾನು ಮಾಡಿದ ಯೋಜನೆಗಳು ಈಗಲೂ ಮುಂದುವರಿದಿವೆ. ನಾನು ಮಾಡಿದ ಸೇವೆಯನ್ನು ಗುರುತಿಸಿ ಅವಕಾಶ ಕೊಡಿ ಎಂದು ಕೇಳಿದ್ದೇನೆ'' ಎಂದರು.
ಹಿಂದೂ ಕಾರ್ಯಕರ್ತನ ಬಂಧನ ವಿಚಾರ: ಹಿಂದೂ ಕಾರ್ಯಕರ್ತನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, "ವಿವಾದ ಆಗ್ತಾ ಇಲ್ಲ. ವಿವಾದ ಮಾಡಲಾಗುತ್ತಿದೆ. ನನ್ನ ಹೆಸರು, ಫೋಟೋ ಠಾಣೆಯಲ್ಲಿದ್ದರೆ, ಪೊಲೀಸರು ನೋಟಿಸ್ ನೀಡುತ್ತಾರೆ. ನಾಡಿನ ಕಾನೂನು ಗೌರವಿಸಬೇಕಾಗುತ್ತದೆ. ಶ್ರೀಕಾಂತ್ ಪೂಜಾರಿ ಯಾರು? ದೊಡ್ಡ ಸಮಾಜ ಸೇವಕರಾ? ಅವನ ಮೇಲೆ 16 ಕೇಸ್ಗಳು ಇವೆ. ಕ್ರಿಮಿನಲ್ ಕೇಸ್ನಲ್ಲಿ ಭಾಗಿಯಾದ ಅವರು ಹಿಂದೂ ಕಾರ್ಯಕರ್ತರಾ'' ಎಂದು ಪ್ರಶ್ನಿಸಿದರು.
''ಕರ ಸೇವಕ ಅಂದರೆ ಏನು ಅರ್ಥ? ದೇವರನ್ನು ನಿರ್ಮಲ ಭಾವದಿಂದ ಪೂಜೆ ಮಾಡುವವನು ಕರ ಸೇವಕ. ಕ್ರಮಿನಲ್ ಹಿನ್ನೆಲೆಯುಳ್ಳವನು ಕರಸೇವಕನಾ? ಒಂದು ಮೂಲೆಯಿಂದ ನೀ ಕಳ್ಳ ಅಂತಾರೆ, ಇನ್ನೊಂದು ಮೂಲೆಯಲ್ಲಿ ಕೂತವನು ನಿನ್ನ ಅಪ್ಪ ಕಳ್ಳ ಅಂತಾರೆ. ಯಾವ ದಿಕ್ಕಿನತ್ತ ರಾಜ್ಯ ರಾಜಕಾರಣ ಹೋಗುತ್ತಿದೆ? ವಿಪಕ್ಷ ವಿಪಕ್ಷವಾಗಿ ಕೆಲಸ ಮಾಡುತ್ತಿಲ್ಲ'' ಎಂದು ಕಿಡಿಕಾರಿದರು.