ಬೆಂಗಳೂರು :ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಪ್ರಧಾನಿ ಮೋದಿ ಅವರು ಚುನಾವಣಾ ಸಂದರ್ಭದಲ್ಲಿ ರಾಜ್ಯಕ್ಕೆ ಬಂದು ಪ್ರಚಾರ ಮಾಡುತ್ತಾರೆ ಸಂಕಷ್ಟದಲ್ಲಿದ್ದಾಗ ಬರುವುದಿಲ್ಲ ಎಂದು ಮನಃಸಾಕ್ಷಿ ಇಲ್ಲದ ಮೋದಿ ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿ ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
‘‘ನೆರೆ ಬಂದಾಗ ಕಣ್ಣೆತ್ತಿ ನೋಡಲಿಲ್ಲ, ಬರ ಬಂದಾಗ ಬರಲಿಲ್ಲ. ಆದರೆ, ಚುನಾವಣೆ ವರ್ಷದಲ್ಲಿ ತಿಂಗಳಿಗೆ ನಾಲ್ಕು ಬಾರಿ ರಾಜ್ಯಕ್ಕೆ ಬರುತ್ತಾರೆ ನರೇಂದ್ರ ಮೋದಿ!! ಅವರ ಸರ್ಕಾರವು ಸ್ವಾಭಿಮಾನಿಗಳ ನಾಡು ಕರ್ನಾಟಕವನ್ನು ಎಷ್ಟು ಕೀಳಾಗಿ ನಡೆಸಿಕೊಳ್ಳುತ್ತಿದೆ ಎನ್ನುವುದಕ್ಕೆ ಅನುದಾನ ಹಂಚಿಕೆಯ ಮಹಾಮೋಸವೇ ಸಾಕ್ಷಿ‘‘ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಅನುದಾನದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವುದು ನರೇಂದ್ರ ಮೋದಿ ಸರ್ಕಾರದ ನೀತಿ. ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣ ಅವರ ರಾಜನೀತಿ. ತೆರಿಗೆ ತೆರಲಿಕ್ಕೆ ದಕ್ಷಿಣ ಭಾರತ, ಅನುದಾನ ಹಂಚಲಿಕ್ಕೆ ಉತ್ತರ ಭಾರತ. ಇದು ಕೇಂದ್ರ ಬಿಜೆಪಿ ಪಕ್ಷದ ಅಖಂಡ ಭಾರತದ ಅಭಿವೃದ್ಧಿ ವೈಖರಿ ಎಂದು ಉತ್ತರದ ರಾಜ್ಯಗಳಿಗೆ ಹೆಚ್ಚು ಅನುದಾನ ಬಿಡುಗಡೆಯಾಗಿರುವುದರ ಬಗ್ಗೆ ಕುಮಾರಸ್ವಾಮಿ ಕುಟುಕಿದ್ದಾರೆ.
ದಕ್ಷಿಣದವರನ್ನು ಮಲತಾಯಿ ದೋರಣೆ ಅನುಸರಿಸುತ್ತಿಲ್ಲವೇ?- ಹೆಚ್‌ಡಿಕೆ ಪ್ರಶ್ನೆ:ಕಳೆದ 5 ವರ್ಷದಲ್ಲಿ ಉತ್ತರ ಮತ್ತು ದಕ್ಷಿಣ ರಾಜ್ಯಗಳಿಗೆ ಕೊಟ್ಟ ಅನುದಾನದ ಅಂಕಿ ಸಂಖ್ಯೆಯನ್ನು ಲೋಕಸಭೆಯಲ್ಲಿ ಮಂಡಿಸಿದ ಸಚಿವರಿಗೆ ಕೊಂಚವೂ ಲಜ್ಜೆ ಎನಿಸಲಿಲ್ಲವೆ? ದಕ್ಷಿಣದವರನ್ನು ನರೇಂದ್ರ ಮೋದಿ ಮತ್ತು ಸರ್ಕಾರ ಮಲತಾಯಿ ಮಕ್ಕಳಂತೆ ನಡೆಸಿಕೊಳ್ಳುತ್ತಿದೆ. ಕನ್ನಡಿಗರಂತೂ ಬಿಜೆಪಿಗರಿಗೆ ತಬ್ಬಲಿ ಮಕ್ಕಳೇ ಆಗಿದ್ದಾರೆ. ಕೇಂದ್ರಕ್ಕೆ ಕರ್ನಾಟಕ ಗರಿಷ್ಠ ತೆರಿಗೆ ತೆರುತ್ತಿದೆ. ಬಿಜೆಪಿ ಪಾಲಿಗೆ ಕರ್ನಾಟಕ ಪೊಗದಸ್ತಾದ ಎಟಿಎಂ ಆಗಿಬಿಟ್ಟಿದೆ.
ಅದೇ ಅನುದಾನವನ್ನು ಹಂಚುವ ಹೊತ್ತಿನಲ್ಲಿ ಮೋದಿ ಕೈಗಳು ಉತ್ತರದ ರಾಜ್ಯಗಳ ಕಡೆಗೇ ವಾಲುತ್ತಿವೆ. ಚುನಾವಣೆ ಬಂದಾಗ ಅವರ ವಿಮಾನ ಸದಾ ಬೆಂಗಳೂರಿನತ್ತಲೇ ಹಾರುತ್ತದೆ!! ಎಂದು ಈ ವರ್ಷದ ಆರಂಭದಿಂದ ಮೋದಿ ಅವರು ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಕರ್ನಾಟಕ್ಕೆ ಬರುತ್ತಿರುವುದರ ಬಗ್ಗೆ ಟೀಕಿಸಿದ್ದಾರೆ. ಅನುದಾನ ಹಂಚಿಕೆ, ತೆರಿಗೆ ಪಾಲು, ಬಾಹ್ಯ ನೆರವಿನ ಯೋಜನೆಗಳಿಗೆ ಸಹಾಯ ಧನ, ಬಂಡವಾಳ ವೆಚ್ಚಕ್ಕಾಗಿ ಕೊಟ್ಟ ನೆರವು ಸೇರಿ ಎಲ್ಲ ವಿಶೇಷ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಸೊನ್ನೆ ಸುತ್ತಿರುವುದು ಹೇಯ. ಕೇಂದ್ರ ಬಿಜೆಪಿಗೆ 25 ಸಂಸದರನ್ನು ಕೊಟ್ಟ ಕರ್ನಾಟಕಕ್ಕೆ ಇಂಥ ದುರ್ಗತಿಯೇ? ಇದು ಡಬಲ್ ಎಂಜಿನ್ ಸರ್ಕಾರದ ದ್ರೋಹ ಎಂದು ಹೇಳುವ ಮೂಲಕ ರಾಜ್ಯದಿಂದ ಆಯ್ಕೆ ಆದ ಸಂಸದರನ್ನೂ ಪ್ರಶ್ನಿಸಿದ್ದಾರೆ.
ಅನ್ಯಾಯಕ್ಕೆ ಕಾರಣ ಹೇಳಿ ಎಂದ ಕುಮಾರಸ್ವಾಮಿ:ಮೂರು ತಿಂಗಳಲ್ಲಿ ರಾಜ್ಯದ ಚುನಾವಣೆ, ಭಾಷಣದಲ್ಲಿ ಬರೀ ಚಿತಾವಣೆ. ತಿಂಗಳಿಗೆ ಹತ್ತು ಸಲ ರಾಜ್ಯಕ್ಕೆ ಬನ್ನಿ. ಆದರೆ, ಕನ್ನಡಿಗರಿಗೆ ಮಾಡಿರುವ ಅನುದಾನದ ಅನ್ಯಾಯಕ್ಕೆ ಕಾರಣ ಹೇಳಿ? ಮಾತಿನಲ್ಲೇ ಜುಟ್ಟಿಗೆ ಮಲ್ಲಿಗೆ ಮುಡಿಸಿದರೆ ಹೇಗೆ ಮೋದಿ ಅವರೇ? ಈ ಅನುದಾನ ಅನ್ಯಾಯ ನನಗೆ ತೀವ್ರ ಆಘಾತ ಉಂಟು ಮಾಡಿದೆ ಎಂದು ಅಭಿವೃದ್ಧಿ ಜಪ ಮಾಡುವ ಬಿಜೆಪಿ ಸರ್ಕಾರ ಅನುದಾನದ ಬರೆ ಹಾಕಿರುವ ಬಗ್ಗೆ ಉತ್ತರಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕ್ಷಮೆ ಕೇಳಲಾರೆ, ತಾಕತ್ತಿದ್ದರೆ ನಾನು ಹೇಳಿದ ವ್ಯಕ್ತಿಯನ್ನು ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಲಿ: ಹೆಚ್‌ಡಿಕೆ