ಬೆಂಗಳೂರು :ರಿಸರ್ವ್ ಬ್ಯಾಂಕ್ ಸಲಹೆಯಂತೆ ಗುರು ರಾಘವೇಂದ್ರ ಬ್ಯಾಂಕ್ಗೆ ಆಡಳಿತಾಧಿಕಾರಿಯಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪರಿಣತಿ ಇರುವವರನ್ನೇ ಆಡಳಿತಾಧಿಕಾರಿಯಾಗಿ ನೇಮಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಗುರು ರಾಘವೇಂದ್ರ ಬ್ಯಾಂಕ್ ಹಗರಣದ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು ವಾದಿಸಿ, ಬ್ಯಾಂಕ್ ಸಾಲಗಾರರಿಂದ ವಸೂಲಿ ಮಾಡಿರುವ ಹಣವನ್ನು ಠೇವಣಿದಾರರಿಗೆ ಹಿಂದಿರುಗಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಆರ್ಬಿಐ ಈವರೆಗೂ ಪರಿಗಣಿಸಿಲ್ಲ. ಪರಿಗಣಿಸಿ ಠೇವಣಿದಾರರ ಹಣ ಹಿಂದಿರುಗಿಸಿದರೆ ಕೊರೊನಾ ಸಂದರ್ಭದಲ್ಲಿ ತುಂಬಾ ಅನುಕೂಲವಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆರ್ಬಿಐ ಪರ ವಕೀಲರು, ಠೇವಣಿದಾರರ ಹಣ ಹಿಂದಿರುಗಿಸುವ ಸಂಬಂಧ ಈಗಲೇ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆಡಿಟಿಂಗ್ ಕೂಡ ಪೂರ್ಣಗೊಂಡಿಲ್ಲ. ಹೀಗಾಗಿ ಹಣ ಹಿಂದಿರುಗಿಸುವ ಸಂಬಂಧ ಸೂಕ್ತ ಸಮಯದಲ್ಲಿ ಆರ್ಬಿಐ ನಿರ್ಣಯ ಕೈಗೊಳ್ಳಲಿದೆ ಎಂದರು.
ಅಲ್ಲದೇ, ಬ್ಯಾಂಕ್ ನೀಡಿರುವ 1,400 ಕೋಟಿ ರೂಪಾಯಿ ಹಣ ಈವರೆಗೂ ವಸೂಲು ಆಗಿಲ್ಲ. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದ ವಹಿವಾಟುಗಳ ಬಗ್ಗೆ ಜ್ಞಾನ ಹೊಂದಿರುವ ಸಮರ್ಥರನ್ನು ಆಡಳಿತಾಧಿಕಾರಿಯಾಗಿ ನೇಮಿಸುವ ಅಗತ್ಯವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆರ್ಬಿಐ ಸಲಹೆಯನ್ನು ರಾಜ್ಯ ಸರ್ಕಾರ ಪರಿಗಣಿಸಿ ಸೂಕ್ತ ಆಡಳಿತಾಧಿಕಾರಿ ನೇಮಕ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.