ಬೆಂಗಳೂರು:ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಇದರ ಬೆನ್ನಲ್ಲೇ ಜೆಡಿಎಸ್ ಪಕ್ಷದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಅವರು, ನಾನು ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮಾರ್ಚ್ 31ಕ್ಕೆ ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ. ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ ಅವರು ಕೂಡ ಕಾಂಗ್ರೆಸ್ಗೆ ಸೇರ್ತಾರೆ. ಗುಬ್ಬಿಯಲ್ಲಿ ಎಲ್ಲ ಕಾಂಗ್ರೆಸ್ ನಾಯಕರು ಒಟ್ಟಾಗಿ ಇದ್ದಾರೆ. ಅವರ ಬೆಂಬಲದೊಂದಿಗೆ ಗುಬ್ಬಿಯಿಂದ ಕಾಂಗ್ರೆಸ್ ಪಕ್ಷದಿಂದ ಗೆಲ್ಲುವ ವಿಶ್ವಾಸ ಇದೆ ಎಂದರು.
ನಾನು ಅಡ್ಡ ಮತದಾನ ಮಾಡಿದ್ದೀನಿ ಎಂದು ಕುಮಾರಸ್ವಾಮಿ ಯಾವ ಆ ಧಾರದಲ್ಲಿ ಹೇಳಿದ್ರೋ ಗೊತ್ತಿಲ್ಲ. ಅವರೇ ಅಡ್ಡ ಮತದಾನ ಮಾಡಿಸಿ ನನ್ನ ತಲೆಗೆ ಕಟ್ಟಿದ್ರು ಎಂದು ಜೆಡಿಎಸ್ ಉಚ್ಚಾಟಿತ ಶಾಸಕ ಗುಬ್ಬಿ ಶ್ರೀನಿವಾಸ್ ತಿಳಿಸಿದರು. ಕಳೆದ 20 ವರ್ಷಗಳಿಂದ ನನಗೆ ಜನತಾದಳದಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದಕ್ಕೆ ದೇವೇಗೌಡರಿಗೆ, ಕುಮಾರಸ್ವಾಮಿ, ರೇವಣ್ಣ ಹಾಗೂ ಪಕ್ಷದ ಎಲ್ಲರಿಗೂ ಧನ್ಯವಾದಗಳು. 20 ವರ್ಷಗಳಿಂದ ಭಾವನಾತ್ಮಕ ಸಂಬಂಧವನ್ನು ಇಟ್ಟುಕೊಂಡಿದ್ದೇನೆ. ಎಲ್ಲ ಶಾಸಕರು ಇಲ್ಲಿಯೇ ಉಳಿದುಕೋ ಎಂದು ಒತ್ತಾಯ ಮಾಡ್ತಾ ಇದ್ದಾರೆ. ಪ್ರೀತಿಯಿಂದ ನಾವುಗಳು ಒಂದೇ ಕುಟುಂಬದಲ್ಲಿ ಇದ್ದೆವು. ಕುಮಾರಸ್ವಾಮಿ ಅಕ್ಟೋಬರ್ 21, 2021 ರವರೆಗೆ ನನ್ನ ಜೊತೆ ಚೆನ್ನಾಗಿ, ಅಣ್ಣ ತಮ್ಮಂದಿರಾಗಿ ಇದ್ದರು ಎಂದು ತಿಳಿಸಿದರು.