ಕರ್ನಾಟಕ

karnataka

ETV Bharat / state

Gruha Jyothi: ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹ ಜ್ಯೋತಿ ಯೋಜನೆ ಲಭ್ಯ: ಪಾವತಿಗೆ ಸೆ.30 ಗಡುವು - ಗೃಹ ಜ್ಯೋತಿ ನೋಂದಣಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಗೆ ಭರದಿಂದ ಅರ್ಜಿ ಸಲ್ಲಿಕೆ ಕಾರ್ಯ ನಡೆಯುತ್ತಿದೆ.

Gruha Jyothi
ಗೃಹ ಜ್ಯೋತಿ

By

Published : Jul 3, 2023, 7:07 AM IST

ಬೆಂಗಳೂರು:ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ. ಇದೇ ವೇಳೆ ಹಿಂಬಾಕಿಯನ್ನು ಸೆ.30 ರೊಳಗೆ ಪಾವತಿಸುವಂತೆ ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ.

ಜುಲೈ 25ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ ಆಗಸ್ಟ್ ತಿಂಗಳ ಬಿಲ್​ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ, ಜುಲೈ 25 ರಿಂದ ಆಗಸ್ಟ್ 25ರೊಳಗೆ ನೋಂದಾಯಿಸಿದಲ್ಲಿ ಸೆಪ್ಟೆಂಬರ್ ತಿಂಗಳ ಬಿಲ್​ನಲ್ಲಿ ಯೋಜನೆಯ ಪ್ರಯೋಜನ ಸಿಗಲಿದೆ. (ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25 ನೇ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ) ಎಂದು ಮಾಹಿತಿ ನೀಡಿದೆ.

ಈ ಪ್ರಯೋಜನ ಪಡೆಯಲು ನಿಮ್ಮ ವಿದ್ಯುತ್ ಬಳಕೆಯು ಸರಾಸರಿ 200 ಯೂನಿಟ್ ಮೀರಿರಬಾರದು. ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್​ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ. ಈ ಯೋಜನೆಯ ನೋಂದಣಿಗೆ ಅಂತಿಮ ಗಡುವು ನೀಡಿಲ್ಲ. ಯಾವಾಗ ಬೇಕಾದರೂ ನೋಂದಣಿ ಮಾಡಿಕೊಳ್ಳಬಹುದು.

ಗೃಹ ಜ್ಯೋತಿ ನೋಂದಣಿ ಎಷ್ಟು?: ಗೃಹ ಜ್ಯೋತಿಗಾಗಿ ಜುಲೈ 2ರ ಸಂಜೆ 6.30ರವರೆಗೆ ಒಟ್ಟು 92,50,157 ನೋಂದಣಿ ಆಗಿದೆ. ಜೂನ್ 18ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿತ್ತು. ಭಾನುವಾರ ಸಂಜೆ 6.30ರ ವರೆಗೆ ಒಟ್ಟು 1,01,915 ನೋಂದಣಿ ಮಾಡಿದ್ದಾರೆ.

ಇದನ್ನೂ ಓದಿ :Congress Guarantee: ಗೃಹ ಜ್ಯೋತಿಗೆ ಅರ್ಜಿ ಸಲ್ಲಿಕೆ : ಕೈಕೊಟ್ಟ ಸೇವಾ ಸಿಂಧು ಪೋರ್ಟಲ್

ಗೃಹ ಜ್ಯೋತಿ ಯೋಜನೆಯ ಷರತ್ತುಗಳು : ಈ ಯೋಜನೆ ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ. ಹಾಗೆಯೇ, ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ ಅ​ನ್ನು ನಮೂದಿಸಲಾಗುತ್ತದೆ. 200 ಯೂನಿಟ್​ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್​ ಅನ್ನು ಪಾವತಿಸಬೇಕು. ಮತ್ತು ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್​ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ ನೆಟ್​ ಬಿಲ್​ ನೀಡಲಾಗುತ್ತದೆ ಹಾಗೂ ಗ್ರಾಹಕರು ನೆಟ್​ ಬಿಲ್​ ಅನ್ನು ಪಾವತಿಸಬೇಕು. ಅರ್ಹ ಯುನಿಟ್ ಅಥವಾ ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್​​ ನೀಡಲಾಗುತ್ತದೆ. ಪ್ರತಿ ಫಲಾನುಭವಿ ತನ್ನ Customer ID/Account ID ಕಡ್ಡಾಯವಾಗಿ ಆಧಾರ್​​ಗೆ ಜೋಡಣೆ ಮಾಡಲೇಬೇಕು. ಸದ್ಯಕ್ಕೆ ಜಾರಿಯಲ್ಲಿರುವ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳೂ ಈ ಯೋಜನೆಯಲ್ಲಿ ಸೇರಬಹುದು. ಜೊತೆಗೆ, ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮೀಟರ್ ಇದ್ದರೆ 1 ಮೀಟರ್​ಗೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ :ಕಾಂಗ್ರೆಸ್​ ಗ್ಯಾರಂಟಿಗಳ ಬೇಷರತ್ ಜಾರಿಗೆ ಆಗ್ರಹ: ಸದನದೊಳಗೆ ಶಾಸಕರಿಂದ, ಹೊರಗೆ ಬಿಎಸ್​ವೈ ನೇತೃತ್ವದಲ್ಲಿ ಬಿಜೆಪಿ ಹೋರಾಟ

ABOUT THE AUTHOR

...view details