ಬೆಂಗಳೂರು:ಜೆಎಸ್ಡಬ್ಲ್ಯೂ ಕಂಪನಿಯ ವಿದ್ಯುತ್ ಸರಬರಾಜು ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿ ಇತ್ಯರ್ಥವಾಗುವವರೆಗೂ ಜೆಎಸ್ಡಬ್ಲ್ಯೂ ಎನರ್ಜಿ ಲಿಮಿಟೆಡ್ಗೆ ರಾಜ್ಯ ಸರ್ಕಾರ ಪ್ರತಿ ಯೂನಿಟ್ (ಕಿಲೋ ವ್ಯಾಟ್ ಹವರ್-ಕೆಡಬ್ಲ್ಯೂಎಚ್) ವಿದ್ಯುತ್‌ಗೆ 7.25 ರೂಪಾಯಿ ಪಾವತಿಸುತ್ತದೆ ಎಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಸರ್ಕಾರದ ಆದೇಶದಂತೆ ಹೆಚ್ಚುವರಿ ವಿದ್ಯುತ್ ಅನ್ನು ರಾಜ್ಯದ ಗ್ರಿಡ್ಗೆ ಸರಬರಾಜು ಮುಂದುವರಿಸುವಂತೆ ಏಕಸದಸ್ಯ ಪೀಠವು ಅಕ್ಟೋಬರ್ 27ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಜೆಎಸ್ಡಬ್ಲ್ಯೂ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ಏಕಸದಸ್ಯ ಪೀಠವು ತನ್ನ ಮುಂದಿರುವ ಅರ್ಜಿಯನ್ನು ಒಂದು ವಾರದಲ್ಲಿ ಇತ್ಯರ್ಥಪಡಿಸಬೇಕು. ವಿದ್ಯುತ್ ಖರೀದಿ ದರ ಸೇರಿದಂತೆ ಎಲ್ಲಾ ವಿವಾದಾತ್ಮಕ ಅಂಶಗಳನ್ನು ಆಲಿಸಲು ಏಕಸದಸ್ಯ ಪೀಠವು ಮುಕ್ತವಾಗಿದೆ. ಏಕಸದಸ್ಯ ಪೀಠದ ಮುಂದೆ ಇರುವ ಅರ್ಜಿಯು ಇತ್ಯರ್ಥವಾಗುವವರೆಗೂ ರಾಜ್ಯ ಸರ್ಕಾರವು ಜೆಎಸ್ಡಬ್ಲ್ಯೂ ಎನರ್ಜಿ ಲಿಮಿಟೆಡ್ಗೆ ಪ್ರತಿ ಯೂನಿಟ್ (ಕಿಲೋ ವ್ಯಾಟ್ ಹವರ್-ಕೆಡಬ್ಲ್ಯೂಎಚ್) ವಿದ್ಯುತ್‌ಗೆ 7.25 ರೂಪಾಯಿ ಪಾವತಿಸಲಿದೆ. ಹಾಲಿ ವಿದ್ಯುತ್ ಖರೀದಿ ದರವು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ವಿಭಾಗೀಯ ಪೀಠ ಹೇಳಿತು.
ಜೆಎಸ್ಡಬ್ಲ್ಯೂ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹಟ್ಗಿ, ಅಕ್ಟೋಬರ್ 16ರಂದು ರಾಜ್ಯ ಸರ್ಕಾರವು ಆದೇಶದ ಮೂಲಕ ಪ್ರತಿ ಯೂನಿಟ್ಗೆ 4.86 ರೂಪಾಯಿಯಂತೆ ಖರೀದಿಸಲಾಗುವುದು ಎಂದಿದೆ. ಆದರೆ, ಈ ಆದೇಶ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ವಿದ್ಯುಚ್ಛಕ್ತಿ ಕಾಯಿದೆ ಸೆಕ್ಷನ್ 11ರ ಅಡಿ ಕೇಂದ್ರ ಸರ್ಕಾರವು ಫೆಬ್ರವರಿ 20ರಂದು ಮಾಡಿರುವ ಆದೇಶ ಪಾಲಿಸಬೇಕಿದೆ ಎಂದು ಪೀಠಕ್ಕೆ ತಿಳಿಸಿದರು.
ಮಾರುಕಟ್ಟೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ದರಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ಅರ್ಧ ಹಣ ಪಾವತಿಸಲಾಗುವುದು ಎಂದು ಹೇಳಲಾಗಿದೆ. ಇದರಿಂದ ಪ್ರತಿ ದಿನ ಜೆಎಸ್ಡಬ್ಲ್ಯೂಗೆ 10 ಕೋಟಿ ರೂಪಾಯಿ ನಷ್ಟವಾಗಲಿದೆ. ಈ ಮಧ್ಯೆ, ಫೆಬ್ರವರಿ 20ರ ಆದೇಶವನ್ನು ಕೇಂದ್ರ ಸರ್ಕಾರವು 2024ರ ಜೂನ್ 30ರವರೆಗೆ ವಿಸ್ತರಿಸಿದೆ. ಇದನ್ನು ಉಲ್ಲೇಖಿಸಿದರೂ ಏಕಸದಸ್ಯ ಪೀಠವು ಇದನ್ನು ಪರಿಗಣಿಸಿಲ್ಲ ಎಂದು ಹೇಳಿದರು.