ಬೆಂಗಳೂರು :ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ನಿವೇಶನ ಹಾಗೂ ಸ್ವ ಉದ್ಯೋಗಕ್ಕಾಗಿ 5 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು. ವಿಧಾನಸೌಧದಲ್ಲಿ ಪಿಂಚಣಿಗಾಗಿನ 'ಹಲೋ ಕಂದಾಯ ಸಚಿವರೇ' ಸಹಾಯವಾಣಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರು ನಿವೇಶನ ಇಲ್ಲ ಅಂತಿದ್ದಾರೆ. ಆ್ಯಸಿಡ್ ದಾಳಿಗೊಳಗಾದ ಎಲ್ಲರಿಗೆ ಸರ್ಕಾರದಿಂದ ನಿವೇಶನ ನೀಡಲಾಗುವುದು. ಆ ಸಂಬಂಧ ನಾಳೆ ಆದೇಶ ಹೊರಡಿಸಲಾಗುತ್ತದೆ. ವಸತಿ ಯೋಜನೆಯಡಿ ಅವರಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಇದರ ಜೊತೆಗೆ ಸಂತ್ರಸ್ತ ಮಹಿಳೆಯರಿಗೆ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಿ, ಸ್ವಯಂ ಉದ್ಯೋಗ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
ನಮ್ಮದು ಜನಪರ ಆಡಳಿತ : ಜನರಿಗೋಸ್ಕರ ಈ ಸರ್ಕಾರ ಇದೆ, ಜನಪರ ಆಡಳಿತ ಕೊಡುತ್ತೇವೆ. ರಾಜಕೀಯದಲ್ಲಿ ಎರಡು ರಾಜಕೀಯ ಇರುತ್ತದೆ. ಜನರ ಪರವಾದ ರಾಜಕೀಯ, ಇನ್ನೊಂದು ಅಧಿಕಾರದ ರಾಜಕಾರಣ. ಅಧಿಕಾರ ಸಿಕ್ಕಾಗ ಜನಪರ ಕೆಲಸ ಮಾಡಿದ ಆಡಳಿತಗಾರರನ್ನು ಜನ ಸದಾ ನೆನಪಿಟ್ಟಿರುತ್ತಾರೆ. ಹಳ್ಳಿಗಳಲ್ಲಿ ಜನರು ಸಮಸ್ಯೆ ಜೊತೆ ಜೀವನ ಮಾಡುತ್ತಾರೆ. ನಾವು ಬಿಸಲೇರಿ ನೀರು ಕುಡಿದು, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡುತ್ತೇವೆ. ನಾವು ಎಸಿ ರೂಮಿನಲ್ಲಿ ಕೂತು ಬರದ ಬಗ್ಗೆ ಮಾತನಾಡುತ್ತೇವೆ. ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ ಎಂದು ಬೊಮ್ಮಾಯಿ ತಿಳಿಸಿದರು.
ಅಧಿಕಾರ ಗ್ರಾಮಗಳಿಗೆ ತಲುಪಬೇಕು : ಆಳುವುದು ಎಂದರೆ ಹೃದಯದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವುದಾಗಿದೆ. ಇಂದು ಆಡಳಿತ ಮಾಡುವವರು ಆಳುವುದಕ್ಕೆ ಹೋಗುತ್ತಾರೆ. ಇದು ಜನಸ್ಪಂದನೆ ಇರುವ ಸರ್ಕಾರ ಆಗಿದೆ. ಮನೆ ಬಾಗಿಲಿಗೆ ಸೇವೆ ಬರುವುದು ಅಧಿಕಾರದ ವಿಕೇಂದ್ರೀಕರಣವಾಗಿದೆ. ಅಧಿಕಾರ ನೇರವಾಗಿ ನಮ್ಮ ಗ್ರಾಮಗಳಿಗೆ ತಲುಪಬೇಕು. ಜೇನುತುಪ್ಪದಂತೆ ಹರಿದು ಹೋಗಬೇಕು. ಗ್ರೀಸ್ ತರ ಕೂರಬಾರದು. ಆ ಕೆಲಸವನ್ನು ಸಚಿವ ಆರ್.ಅಶೋಕ್ ಮಾಡಿದ್ದಾರೆ ಎಂದರು.