ಕರ್ನಾಟಕ

karnataka

ಹುಕ್ಕಾ ಬಾರ್​​ಗಳನ್ನು ನಿಷೇಧಿಸಲು ಸರ್ಕಾರ ಚಿಂತನೆ: ಸಚಿವ ಬಸವರಾಜ್ ಬೊಮ್ಮಾಯಿ

By

Published : Feb 2, 2021, 2:12 PM IST

ಯುವ ಜನತೆಯನ್ನು ಹಾಳು ಮಾಡುತ್ತಿರುವ ಹುಕ್ಕಾ ಬಾರ್​​ಗಳನ್ನು ನಿಷೇಧಿಸುವ ಸಂಬಂಧ ನೆರೆ ರಾಜ್ಯಗಳ ಕಾನೂನನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಹುಕ್ಕಾ ಬಾರ್​​ಗಳ ವಿಚಾರದಲ್ಲಿ ನೆರೆ ರಾಜ್ಯಗಳು ಕೈಗೊಂಡಿರುವ ಕ್ರಮಗಳೇನು? ಎಂಬುದನ್ನು ಅಧ್ಯಯನ ಮಾಡಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.

Minister Basavaraj Bommai
ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು:ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ತಲೆ ಎತ್ತಿರುವ ಹುಕ್ಕಾ ಬಾರ್​​ಗಳನ್ನು ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭೆಯಲ್ಲಿ ಇಂದು ಶಾಸಕಿ ಸೌಮ್ಯಾ ರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಯುವ ಜನತೆಯನ್ನು ಹಾಳು ಮಾಡುತ್ತಿರುವ ಹುಕ್ಕಾ ಬಾರ್​​ಗಳನ್ನು ನಿಷೇಧಿಸುವ ಸಂಬಂಧ ನೆರೆ ರಾಜ್ಯಗಳ ಕಾನೂನನ್ನು ಪರಿಶೀಲಿಸಿ ಮುಂದುವರಿತ್ತೇವೆ ಎಂದರು. ಹುಕ್ಕಾ ಬಾರ್​​ಗಳ ವಿಷಯದಲ್ಲಿ ನೆರೆ ರಾಜ್ಯಗಳು ಕೈಗೊಂಡಿರುವ ಕ್ರಮಗಳೇನು? ಎಂಬುದನ್ನು ಅಧ್ಯಯನ ಮಾಡಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಹುಕ್ಕಾ ಬಾರ್​​ಗಳನ್ನು ನಿಷೇಧಿಸಲು ಸರ್ಕಾರ ಚಿಂತನೆ: ಸಚಿವ ಬಸವರಾಜ್ ಬೊಮ್ಮಾಯಿ

ಜನಾಂದೋಲನ: ಗಾಂಜಾ, ಡ್ರಗ್ಸ್ ಹಾವಳಿ ಹೆಚ್ಚಿದೆ. ಕಳೆದ ಐದು ವರ್ಷಗಳಲ್ಲೇ ಹೆಚ್ಚು ಕ್ರಮ ಕೈಗೊಂಡಿದ್ದರೂ, ಈ ಜಾಲವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವ ದೃಷ್ಟಿಯಿಂದ ಜನಾಂದೋಲನವನ್ನೇ ಕೈಗೊಳ್ಳಬೇಕಾಗಿದೆ. ಹಾಗಾಗಿ, ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಇದು ಕೇವಲ ಸರ್ಕಾರದಿಂದಾಗುವ ಕೆಲಸವಲ್ಲ. ಬದಲಿಗೆ ಜನರೇ ಮುಂದೆ ನಿಂತು ಮಾಡಬೇಕಾದ ಕೆಲಸ. ಗಾಂಜಾ, ಡ್ರಗ್ಸ್​ಗಳ ಹಾವಳಿ ಹೆಚ್ಚಿದ್ದು, ಇದನ್ನು ತಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಓದಿ:ಶಾಸಕ ಶರತ್ ಬಚ್ಚೇಗೌಡ ಹಕ್ಕುಚ್ಯುತಿ ಮಂಡನೆ.. ಸಂಪೂರ್ಣ ವರದಿ ತರಿಸಿ ಕ್ರಮ ಎಂದ ಬೊಮ್ಮಾಯಿ

ಈ ಮಧ್ಯೆ ಸಿಂಥೆಟಿಕ್ ಡ್ರಗ್ಸ್ ಹಾವಳಿ ಹೆಚ್ಚುತ್ತಿದ್ದು, ಸಣ್ಣ, ಸಣ್ಣ ವಸ್ತುಗಳಲ್ಲಿಟ್ಟು ಇದನ್ನು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ನಿರಂತರವಾಗಿ ನಾವು ದಾಳಿಗಳನ್ನು ನಡೆಸುತ್ತಲೇ ಇದ್ದು, ಮತ್ತಷ್ಟು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲು ಮಾಧ್ಯಮಗಳ ಜತೆ ಸದ್ಯದಲ್ಲೇ ಒಪ್ಪಂದ ಮಾಡಿಕೊಳ್ಳಲಾಗುವುದು. ಹುಕ್ಕಾ ಬಾರ್​​ಗಳಿಗೆ ಸ್ಥಳೀಯ ಸಂಸ್ಥೆಗಳು ಪರವಾನಗಿ ನೀಡುತ್ತವೆ. ಹೀಗಾಗಿ ಅವುಗಳನ್ನು ನಿಷೇಧಿಸುವ ಸಂಬಂಧ ಬಿಬಿಎಂಪಿ, ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.

ಬಡವರು, ಶ್ರೀಮಂತರು ಎನ್ನದೆ ಎಲ್ಲರೂ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಇದನ್ನು ಕಟ್ಟುನಿಟ್ಟಾಗಿ ತಡೆಯಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಡ್ರಗ್ಸ್ ವಿರುದ್ಧ ಯುದ್ಧ ನಿರಂತರವಾಗಿರುತ್ತದೆ. 2016 ರಲ್ಲಿ ಕೇವಲ 127 ಡ್ರಗ್ಸ್ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ 2020ರಲ್ಲಿ 2,786 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಚಿವರು ವಿವರಿಸಿದರು.

ABOUT THE AUTHOR

...view details