ಬೆಂಗಳೂರು : ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದನ್ನು ಬಿಟ್ಟು ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ ಸರ್ಕಾರ ಇದೀಗ ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ರಾಜ್ಯ ಸರ್ಕಾರ ಕೊರೊನಾ ಕಾರಣಕ್ಕಾಗಿ ಗ್ರಾಪಂ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಎಂಬ ನೆಪವೊಡ್ಡಿ ಈವರೆಗೂ ಚುನಾವಣೆಯನ್ನು ಮುಂದೂಡುತ್ತಾ ಬಂದಿದೆ. ಚುನಾವಣೆ ನಡೆಸಲು ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕಾಂಗ್ರೆಸ್ ಮುಖಂಡರು ಸಲ್ಲಿಸಿರುವ ಪಿಐಎಲ್ ವಿಚಾರಣೆ ಸಂದರ್ಭದಲ್ಲಿಯೂ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಇದೇ ನೆಪ ಹೇಳಿದೆ. ಆದರೆ, ನಿಯಮಗಳ ಪ್ರಕಾರ ಸರ್ಕಾರಕ್ಕೆ ಇನ್ನು ಚುನಾವಣೆ ಮುಂದೂಡಲು ಅವಕಾಶವಿಲ್ಲ.
ಸರ್ಕಾರ ಹೇಳುತ್ತಿರುವುದೇನು :
ರಾಜ್ಯದಲ್ಲಿರುವ ಒಟ್ಟು 6,025 ಗ್ರಾಮ ಪಂಚಾಯಿತಿಗಳಲ್ಲಿ 5,800 ಗ್ರಾಮ ಪಂಚಾಯಿತಿಗಳ ಅವಧಿ ಜೂನ್ ನಿಂದ ಆಗಸ್ಟ್ ವೇಳೆಗೆ ಮುಕ್ತಾಯವಾಗಿದೆ. ಈ ಗ್ರಾಪಂಗಳಿಗೆ ಚುನಾವಣೆ ನಡೆಸಬೇಕಿದ್ದರೂ, ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾ.ಪಂ. ಚುನಾವಣೆಗಳನ್ನು ನಡೆಸಲಾಗುತ್ತಿಲ್ಲ. ಅಧಿಕಾರಿ ವರ್ಗ ಸೋಂಕು ನಿಯಂತ್ರಣದಲ್ಲಿ ತೊಡಗಿರುವುದರಿಂದಲೂ ಚುನಾವಣೆ ಕಷ್ಟ ಎಂದು ಹೇಳುತ್ತಿದೆ. ಇದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್, ಕಿಷನ್ ಸಿಂಗ್ ವರ್ಸಸ್ ಅಹಮದಾಬಾದ್ ಸಿಟಿ ಮುನಿಸಿಪಲ್ ಕಾರ್ಪೊರೇಷನ್ ಪ್ರಕರಣದಲ್ಲಿ ನೈಸರ್ಗಿಕ ವಿಪತ್ತು ಎದುರಾದಾಗ ಚುನಾವಣೆ ನಡೆಸುವುದು ಕಷ್ಟವಾಗಲಿದೆ ಎಂದು ವ್ಯಕ್ತಪಡಿಸಿರುವ ಅಭಿಪ್ರಾಯ ಮಂದಿಟ್ಟುಕೊಂಡು ಕೂತಿದೆ.
ಅಸಲಿ ಕಾರಣವೇನು :
ವಾಸ್ತವವಾಗಿ ಕೊರೊನಾ ಸೋಂಕಷ್ಟೇ ಚುನಾವಣೆಗೆ ಅಡ್ಡಿಯಾಗಿಲ್ಲ. ಬದಲಿಗೆ ಸರ್ಕಾರಕ್ಕೆ ಚನಾವಣೆ ನಡೆಸುವ ಇಚ್ಚೆಯೇ ಇಲ್ಲ. ಇದಕ್ಕೆ ಕಾರಣಗಳು ಹಲವಿದ್ದರೂ, ಪ್ರಮುಖ ಕಾರಣ ಖಜಾನೆಯಲ್ಲಿ ಹಣ ಇಲ್ಲದಿರುವುದು. ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಪಂಗಳ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ 250 ಕೋಟಿ ರೂಪಾಯಿ ಕೇಳಿದೆ. ಆದರೆ ಸರ್ಕಾರ ಈವರೆಗೂ ಪೂರ್ತಿ ಹಣವನ್ನು ಬಿಡುಗಡೆ ಮಾಡಿಲ್ಲ. ಸರ್ಕಾರದ ಆರ್ಥಿಕ ಪರಿಸ್ಥಿತಿ ಯಾವ ಪರಿ ಹದಗೆಟ್ಟಿದೆ ಎಂದರೆ ಮಂಗಳೂರಿನ ಘನತ್ಯಾಜ್ಯ ದರಂತದಲ್ಲಿ ಮೃತಪಟ್ಟವರಿಗೆ 14 ಕೋಟಿ ರೂ. ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೈಕೋರ್ಟ್ ಎದುರು ಅಸಹಾಯಕತೆ ತೋಡಿಕೊಂಡಿತ್ತು.
ಸರ್ಕಾರದ ಬಳಿ ಹಣ ಇಲ್ಲದಿರುವುದರಿಂದಲೇ ಬಹುತೇಕ ಕಾಮಗಾರಿಗಳಿಗೆ ನಿಗದಿತ ಅವಧಿಯಲ್ಲಿ ಹಣ ಬಿಡುಗಡೆ ಆಗುತ್ತಿಲ್ಲ. ನೇರ ನೇಮಕಾತಿಯನ್ನೂ ಆರ್ಥಿಕ ಕಾರಣಕ್ಕಾಗಿ ಮುಂದೂಡುತ್ತಿದೆ. ಈಗಾಗಲೇ ಗ್ರಾಪಂಗಳ ಆಡಳಿತಾಧಿಕಾರಿಗಳಿಗೆ ಯಾವುದೇ ಹಣಕಾಸು ವ್ಯವಹಾರ ನಡೆಸದಂತೆ ಸೂಚಿಸಿರುವ ಸರ್ಕಾರ ಚುನಾವಣೆ ನಡೆಸಿದರೆ ಪಂಚಾಯ್ತಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೂ ಹಣ ಕೊಡಬೇಕಾಗುತ್ತದೆ. ಗ್ರಾಪಂಗಳ ಚುನಾವಣೆಯಿಂದ ಸರ್ಕಾರಕ್ಕೆ ಯಾವುದೇ ಲಾಭವಿಲ್ಲ. ಈ ಕಾರಣಕ್ಕಾಗಿಯೇ ಸರ್ಕಾರ ಸರ್ಕಾರ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸುತ್ತಿದೆ.