ಬೆಂಗಳೂರು:ರಾಜ್ಯ ಸರ್ಕಾರವು ವಿವೇಕಾನಂದರ ಹೆಸರಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ನಿರ್ಮಿಸಲು ಹೊರಟಿರುವ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಮುಂದಾಗಿದೆ. ರಾಜ್ಯದಲ್ಲಿ 8,000ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕೆ ವಿವೇಕ ಶಾಲೆ ಕೊಠಡಿ ಎಂದು ಹೆಸರಿಡುವ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ 8,100 ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದ ಅವರ ಹೆಸರು ಇಡುವ ಉದ್ದೇಶ ಇದೆ. ಈಗಾಗಲೇ 992 ಕೋಟಿ ವೆಚ್ಚದಲ್ಲಿ ಶಾಲಾ-ಕಾಲೇಜು ಹೊಸ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಇವುಗಳಿಗೆ ಮಾತ್ರ ಮೊದಲ ಹಂತದಲ್ಲಿ ವಿವೇಕಾನಂದ ಪರಿಕಲ್ಪನೆಯ ಬಣ್ಣ ಬಳಿಸಲಾಗುವುದು ಎಂದು ಶಿಕ್ಷಣ ಇಲಾಖೆ ವಿವರಿಸುತ್ತಿದೆ. ಈ ವಿಚಾರದ ಹಿಂದೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಬಲವಾದ ಪ್ರತಿಪಾದನೆ ಇದೆ.
ಕೇಸರಿ ಎಂಬುದು ಉದಾತ್ತ ಮೌಲ್ಯಗಳಿಗೆ, ಉತ್ತಮ ಆದರ್ಶಗಳಿಗೆ ಸಂಕೇತವಾಗಿದೆ. ವಿವೇಕಾನಂದರ ಹೆಸರಿನ ಕೊಠಡಿಗಳಿಗೆ ಸೂಕ್ತ ಬಣ್ಣ ಅದು. ಮಕ್ಕಳನ್ನು ಆಕರ್ಷಿಸುವುದಕ್ಕೂ ಅದು ಸಹಾಯ ಮಾಡುತ್ತದೆ ಎಂಬುದು ಶಿಕ್ಷಣ ಇಲಾಖೆಯ ಚಿಂತನೆ ಎಂದು ವಿವರಿಸಲಾಗುತ್ತಿದೆ.
ಈಗಾಗಲೇ ಪಠ್ಯಕ್ರಮದ ವಿಚಾರವಾಗಿ ಉಂಟಾಗಿರುವ ದೊಡ್ಡ ಗದ್ದಲವನ್ನೇ ನಿಭಾಯಿಸಲು ಸರ್ಕಾರ ಹೆಣಗಾಡುತ್ತಿದ್ದು, ಶಾಲಾ-ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ತೀರ್ಮಾನ ಕೈಗೊಂಡರೆ ಇನ್ನಷ್ಟು ಪ್ರತಿರೋಧವನ್ನು ಎದುರಿಸಬೇಕಾಗಿ ಬರಲಿದೆ. ಶಿಕ್ಷಣ ಕ್ಷೇತ್ರವನ್ನ ಬಿಜೆಪಿ ಸರ್ಕಾರ ಕೇಸರಿಮಯ ಮಾಡುತ್ತಿದೆ. ಸಂಘ ಪರಿವಾರದ ನಾಯಕರ ಮಾತಿಗೆ ಬೆಲೆಕೊಟ್ಟು ಶಿಕ್ಷಣ ಕ್ಷೇತ್ರವನ್ನೇ ಬದಲಿಸಲು ಹೊರಟಿದೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಬಿಜೆಪಿ ಮೇಲೆ ಮಾಡುತ್ತಿವೆ. ಆದರೆ ಇದಕ್ಕೆ ಯಾವುದೇ ರೀತಿ ಸೊಪ್ಪು ಹಾಕದ ಶಿಕ್ಷಣ ಸಚಿವರು ತಮ್ಮ ಪಾಡಿಗೆ ತಾವು ತಮ್ಮ ಕಾರ್ಯ ಮುಂದುವರೆಸಿದ್ದಾರೆ.